Wednesday, December 1, 2021

ಕಥೆಗಳು

                                    ಮುಂಡಿಗೆಗಳು

                                    'ಮುಂಡಿಗೆಗಳು' ಹರಿದಾಸ ಸಾಹಿತ್ಯದಲ್ಲಿ ಬರುವ  ಒಂದು ಪ್ರಾಕಾರ. ಮಂಡೆಗೆ ಕೆಲಸ ಕೊಡುವುದು ಮುಂಡಿಗೆ. ನೇರವಾಗಿ ಹೇಳಬೇಕಾದ  ವಿಚಾರಗಳನ್ನು ಸುತ್ತಿಬಳಸಿ ಹೇಳುವಂತೆ, ವೇದ, ಪುರಾಣಗಳಲ್ಲಿರುವ ವಿಚಾರಗಳನ್ನೆಲ್ಲ ಅದರೊಳಗೆ ಅಳವಡಿಸಿ ಚಿಂತನೆಗೆ ಅವಕಾಶ ಮಾಡಿಕೊಡುವುದಕ್ಕೆ 'ಮುಂಡಿಗೆ' ಎಂದು ಕರೆಯುತ್ತಾರೆ. 


'ಮುಂಡಿಗೆ' ಅಂದರೆ ಹೀಗಿರುತ್ತದೆ:-ಸಜ್ಜನರು ದಿನಗಳನ್ನು ಹೇಗೆ ಕಳೆಯುತ್ತಾರೆ?

ಉತ್ತರ:- ಸಜ್ಜನರು ಬೆಳಗ್ಗೆ ಜೂಜಾಡುತ್ತಾರೆ, ಮಧ್ಯಾಹ್ನ  ಸ್ತ್ರೀ  ವಿಹಾರದಲ್ಲಿ ಕಾಲಕಳೆಯುತ್ತಾರೆ, ರಾತ್ರಿ ಕಳ್ಳತನ ಮಾಡುತ್ತಾರೆ. 

ಇದೆಂತಹ ಉತ್ತರ ಅನ್ನಿಸಿದರೂ, ಇದರ  ಅಂತರಾರ್ಥ ಬೇರೆ ಇರುತ್ತದೆ. 


ಪ್ರಾತಃಕಾಲದಲ್ಲಿ  ದ್ಯೂತ ಪ್ರಸಂಗ :- ಅಂದರೆ ಮಹಾಭಾರತವನ್ನು ಶ್ರವಣ ಮಾಡುವ ಮೂಲಕ ಉತ್ತಮ ಚಿಂತನೆಯಲ್ಲಿ ಕಳೆಯುವುದು. 


ಮಧ್ಯಾಹ್ನ   ಸ್ತ್ರೀ ಪ್ರಸಂಗ:-  ಸೀತಾಪಹರಣ ಮಾಡಿದ ಪ್ರಧಾನವಾದ ರಾಮಾಯಣ ಕಥೆ ಓದಿ, ಕೇಳುವ ಮೂಲಕ ಮಧ್ಯಾಹ್ನ ಕಾಲಕಳೆಯುತ್ತಾರೆ. 


ರಾತ್ರಿಯಲ್ಲಿ  ಚೋರತನ ಮಾಡುತ್ತಾರೆ:-  ಹಾಲು ಕದ್ದ ,ಬೆಣ್ಣೆ ಕದ್ದ ,ಮೊಸರು ಕದ್ದ, ಎಂಬ ನವನೀತ ಚೋರ ಕೃಷ್ಣನ ಕಥೆಯಾದ ಭಾಗವತವನ್ನು  ಪಾರಾಯಣ ಮಾಡುವ  ಮೂಲಕ, ಕಥೆಗಳನ್ನು ಶ್ರವಣ, ಮನನ, ಮಾಡಿ ಕೊಳ್ಳುವುದು. ಹೀಗೆ ಜ್ಞಾನಿಗಳು  ತ್ರಿಕಾಲ ಗಳಲ್ಲಿ,  ದಿನನಿತ್ಯದ ಕಾರ್ಯಗಳ ಜೊತೆ ಭಗವಂತನ  ಚಿಂತನೆಯಲ್ಲಿ ಕಾಲಕಳೆಯುತ್ತಾರೆ. 


ಕನಕದಾಸರ ಮುಂಡಿಗೆ ಕುರಿತು ಒಂದು ಚಿಂತನೆ:-  ಒಮ್ಮೆ ಕನಕದಾಸರು  ತಿರುಪತಿ ಕ್ಷೇತ್ರಕ್ಕೆ ಹೊರಟಿದ್ದರು. ಅವರು ಅಲ್ಲಿಗೆ ಹೋಗುವ ಕಾಲದಲ್ಲಿ , ದೇವಳದಲ್ಲಿರುವ ಮುಖ್ಯಸ್ಥರಿಗೆ,  ನಾಳೆ ದೇವಾಲಯಕ್ಕೆ ಹರಿದಾಸರು ಬರುತ್ತಾರೆ ಅವರಿಗೆ ದೇವಾಲಯದ ಮರ್ಯಾದೆ ಮಾಡಬೇಕು ಎಂದು ಕನಸು ಬಿತ್ತು. ಮರುದಿನ ದೇವಸ್ಥಾನದ ಪಾರುಪತ್ತೇದಾರರು,  ದೇವಸ್ಥಾನಕ್ಕೆ ಬರುವ ದಾಸರಿಗೆ ಮರ್ಯಾದೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕಾಯುತ್ತಿದ್ದರು. 


ಅದೇ  ಸಮಯಕ್ಕೆ ,  ಕನಕದಾಸರು ಕಂಬಳಿ ಹೊದ್ದುಕೊಂಡು, ಕೈಯಲ್ಲಿ ಏಕನಾದ ತಂಬೂರಿ ಹಿಡಿದು," ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ದೊಷ ರಾಶಿ ನಾಶಮಾಡೊ  ಶ್ರೀಶ ಕೇಶವ " ಎಂದು ಹೇಳುತ್ತಾ ಹೋಗುತ್ತಿದ್ದರು. ದಾಸರಿಗಾಗಿ ಕಾಯುತ್ತಿದ್ದವರು  ನೋಡಿದರು, ಆದರೆ  ದಾಸರೆಂದರೆ ತಲೆಗೆ ಪೇಟ ಹಾಕಿಕೊಂಡು, ಸೊಂಟಕ್ಕೆ ಶಲ್ಯ ಸುತ್ತಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ತಂಬೂರಿ ಹಿಡಿದು ಭಜನೆ ಮಾಡುತ್ತಾ ಹೋಗುತ್ತಾರೆ. ಹೀಗೆ ತಿಳಿದು ಕೊಂಡಿದ್ದರು. ಆದರೆ  ಇವರು ಯಾರು?  ಹೀಗೆ ಯೋಚಿಸಿ ಅವರನ್ನೇ ಕೇಳಲು ಹೊರಟರು. ಸ್ವಾಮಿ ತಾವು ಯಾವ ದಾಸರು ಎಂದು ಕೇಳುತ್ತಾರೆ. 


ಭಗವಂತನ  ಕರುಣೆಗೆ ಪಾತ್ರರಾದ ದಾಸರು, ಭಾಗವತದ  ಸ್ಮರಣೆಯನ್ನು ಮಾಡುವಂಥ  ಉತ್ತರವನ್ನು ಮುಂಡಿಗೆ ರೂಪದಲ್ಲಿ ಕೊಡುತ್ತಾರೆ.

" ಪುಟ್ಟ ದಾಸ ನಾನಲ್ಲ, ದಿಟ್ಟ ದಾಸ ನಾನಲ್ಲ, ಸಿಟ್ಟು ದಾಸ ನಾನಲ್ಲ, ಸುಟ್ಟ ದಾಸ ನಾನಲ್ಲ, ಸುಡಗಾಡು ದಾಸ ನಾನಲ್ಲ, ಕಷ್ಟದಾಸ ನಾನಲ್ಲ, ಕೊಟ್ಟ ದಾಸ ನಾನಲ್ಲ, ಹೊಟ್ಟೆ ದಾಸನಲ್ಲ, ಇಟ್ಟಿಗೆ ದಾಸ ನಾನಲ್ಲ, ಶಿಷ್ಟ ದಾಸ ನಾನಲ್ಲ,ನಿಷ್ಠ ದಾಸ ನಾನಲ್ಲ, ಭ್ರಷ್ಟ ದಾಸ ನಾನಲ್ಲ, ಶ್ರೇಷ್ಠ ದಾಸ ನಾನಲ್ಲ, ವಿತ್ತ ದಾಸ ನಾನಲ್ಲ, ಹುತ್ತ ದಾಸ ನಾನಲ್ಲ.  ನಾನು ಈ ಶೋಡಶ ದಾಸರುಗಳ ದಾಸಾನುದಾಸರ  ದಾಸಿಯರ ಮನೆಯ ಮಂಕು ದಾಸರ ಮನೆಯ  ಶಂಕುದಾಸ ಬಾಡದಾದಿ ಕೇಶವನ ದಾಸಕಾಣೆ" ಎಂದು ಇಡೀ ಭಾಗವತೋತ್ತಮರ ಹೆಸರುಗಳನ್ನು  ಸ್ಮರಣೆ ಮಾಡುವಂಥ 'ಮುಂಡಿಗೆ'

ಪ್ರಾಕಾರದಲ್ಲಿ ಹೇಳುವ ಮೂಲಕ ಅವರಿಗೆ ಉತ್ತರವನ್ನು ಕೊಡುತ್ತಾರೆ. 


೧.ಪುಟ್ಟ ದಾಸ :- ಐದು ವರ್ಷದ ಬಾಲಕ ಧೃವ ತಂದೆಯ ತೊಡೆ ಮೇಲೆ ಕುಳಿತುಕೊಳ್ಳಬೇಕೆಂದು ಆಸೆ ಪಟ್ಟು ಮಲತಾಯಿಂದ ತಿರಸ್ಕೃತನಾಗಿ,

ನಾರದರಿಂದ ಉಪದೇಶ ಪಡೆದು, ಭಗವಂತನ ಅನುಗ್ರಹಕ್ಕೆ ಪಾತ್ರನಾದ 'ಧ್ರುವ' ಪುಟ್ಟ ದಾಸ.  


೨.ದಿಟ್ಟ ದಾಸ:- ಮನೆಯಲ್ಲಿ ತಂದೆ ಹರಿಸರ್ವೋತ್ತಮ ಎನಬೇಡ  ಎನ್ನುತ್ತಾರೆ ಖಂಡಮೃಕರು ಸರ್ವೋತ್ತಮ ಅನ್ನಬೇಡ ಎಂದು ಶಿಕ್ಷೆ ಕೊಡುತ್ತಾರೆ. ಇಂತಹ ದೈತ್ಯರ ನಡುವೆ ಇದ್ದು ದೈತ್ಯರ ಮಕ್ಕಳಿಗೆ ಹರಿಸರ್ವೋತ್ತಮ ಎಂದು ಹೇಳುವಂತೆ ಮಾಡಿ ಯಾರಿಗೂ ಹೆದರದೆ ಇದನ್ನೇ ಸಾರುತ್ತ ಶ್ರೀಹರಿಯು ತತ್ವವನ್ನು ಸಾರಿದ . ಕಂಬದಲ್ಲಿ  ನಿನ್ನ ಹರಿ ಇರುವನೆ , ತಂದೆ ಕೇಳಿದಾಗ,

"ಎಳ್ಳು ಕೊನೆಯು, ಮುಳ್ಳುಮೊನೆಯು, ಎಲ್ಲೂ ಬಿಡದೆ ಒಳಗೆ-ಹೊರಗೆ ಎಲ್ಲಾ ಠಾವಿನಲ್ಲಿ ಗೌರಿವವಲ್ಲಭನಿದ್ದಾನೆ"  ಎಂದು ಹೇಳಿದಾಗ ಕಂಬವನ್ನು ಸೀಳಿಕೊಂಡು ನರಸಿಂಹ ಬಂದು ಪ್ರಹ್ಲಾದನ ತಂದೆ ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಾನೆ. ತಂದೆಯನ್ನೇ ಎದುರುಹಾಕಿಕೊಂಡ 'ಪ್ರಹ್ಲಾದ'

ದಿಟ್ಟ ದಾಸ. 


೩.ಸಿಟ್ಟು ದಾಸ:- ಕೋಪಿಷ್ಟರೆಂದೇ ಹೆಸರಾದ ದೂರ್ವಾಸರು, ಭೃಗು ಮಹರ್ಷಿಗಳು, ವಿಶ್ವಾಮಿತ್ರರು ಸಿಟ್ಟು ದಾಸ. 


೪.ಸುಟ್ಟ ದಾಸ :- ಬಾಲಕ್ಕೆ ಬೆಂಕಿ ಹಚ್ಚಿದಾಗ ಇಡೀ ಲಂಕಾ ನಗರವನ್ನು ಸುಟ್ಟ ಹನುಮಂತ ಸುಟ್ಟ ದಾಸ. 


೫.ಸುಡಗಾಡು ದಾಸ:- ಸುಡಗಾಡನ್ನು ಕಾದ ಹರಿಶ್ಚಂದ್ರ ನಾಗಲಿ, ರುದ್ರ ದೇವರಾಗಲಿ, (ರುದ್ರಭೂಮಿ) ಸುಡುಗಾಡು ದಾಸ. 


೬.ಕಷ್ಟ ದಾಸ:- ಭೂಮಿನೆ  ಹಾಸಿಗೆ ಆಕಾಶವೇ ಹೊದಿಕೆ ಅನ್ನುವಂತೆ , ಹಾಸಿ ಹೊದೆಯುವಷ್ಟು ಬಡತನವಿದ್ದರೂ, ಸಂತಾನಕ್ಕೆ ಕೊರತೆ ಇಲ್ಲದೆ ಮನೆತುಂಬಾ ಮಕ್ಕಳು, ಬಡತನ ತಾಳಲಾರದೆ, ನಿಮಗೆ ಸಹಾಯ ಮಾಡುವ  ಸ್ನೇಹಿತರಿಲ್ಲವೇ ?ಎಂದು ಪತ್ನಿ ಕೇಳಿದಾಗ, ಇದ್ದಾನೆ ಅವನೇ ನನ್ನ ಬಾಲ್ಯದ ಗೆಳೆಯ 'ಕೃಷ್ಣ'ಎಂದು ಸಂತೋಷದಿಂದ ಹೇಳಿ ಹೆಂಡತಿ ಕೊಟ್ಟ ಹಿಡಿ ಅವಲಕ್ಕಿಯನ್ನು ಗಂಟುಕಟ್ಟಿಕೊಂಡು ತಂದು ಕೃಷ್ಣನಿಗೆ ಕೊಟ್ಟು ಸಕಲ ಸೌಭಾಗ್ಯವನ್ನು ಪಡೆದ 'ಕುಚೇಲ'. ಅವಲಕ್ಕಿ ಗಂಟನ್ನು ಬಿಚ್ಚಿದ, ಅವ+ಲಕ್ಕಿ ಗಂಟನ್ನು ಬಿಚ್ಚಿ ಸುಧಾಮನ  ದಾರಿದ್ರ್ಯದ ಗಂಟನ್ನೇ ಬಿಚ್ಚಿದ್ದಾನೆ 'ಶ್ರೀಹರಿ' 'ಒಪ್ಪಿದ ಅವಲಕ್ಕಿಗೆ ಕೊಟ್ಟನು ಅಖಿಳಾರ್ಥ' ಪಡೆದ ಕುಚೇಲ ಕಷ್ಟ ದಾಸ. 


೭.ಕೊಟ್ಟ ದಾಸ:- ಮೂರು ಪಾದ ಭೂಮಿ ಬೇಡಲು ಬಂದ ವಾಮನನಿಗೆ, ಕೊಡುತ್ತೇನೆ ಎಂದಾಗ, ಎರಡು ಪಾದಗಳಿಂದ ಹದಿನಾಲ್ಕು ಲೋಕಗಳನ್ನೂ ಅಳೆದಮೇಲೆ, ಮೂರನೇ ಪಾದ  ಎಲ್ಲಿಡಲಿ ಎಂದು  ಕೇಳಿದಾಗ,ನನ್ನ ತಲೆಯ ಮೇಲೆ ಇಡು ಅಂತ ಅಂದು , ತನ್ನನ್ನೇ ತಾನು ಸಮರ್ಪಣೆ ಮಾಡಿದಂಥ 'ಬಲಿಚಕ್ರವರ್ತಿ' ಕೊಟ್ಟ ದಾಸ. 


೮. ಹೊಟ್ಟೆ ದಾಸ:- ಯುಧಿಷ್ಠಿರನ ತಮ್ಮ ಭೀಮನ ಹೆಸರು ವೃಕೋದರ. 'ವೃಕ' ಎನ್ನುವ ಅಗ್ನಿ ಅಂದರೆ ಜಠರಾಗ್ನಿ. ಹೆಬ್ಬೆಟ್ಟು ಗಾತ್ರವಿದ್ದು ಇದು ಆಹಾರ ಜೀರ್ಣ ಮಾಡುತ್ತದೆ. "ಜ್ಞಾನಿ, ವಿರಾಗಿ, ಹರಿಭಕ್ತ ಬಭಾವೆ, ಅತಿ ಬಲವಂತ, ಧೃತಿ, ಸ್ಮೃತಿ ,ಪ್ರಾಣ, ಹೀಗೆ ಹಲವಾರು ವಿಶೇಷತೆಗಳಿಂದ ಕೂಡಿರುವ 'ಭೀಮಸೇನ' ಹೊಟ್ಟೆ ದಾಸ. 


೯ಇಟ್ಟಿಗೆ ದಾಸ:- ತಂದೆತಾಯಿಯನ್ನು ತೊಡೆಯ ಮೇಲೆ ಮಲಗಿಸಿಕೊಂಡಂಥ  ಪುಂಡರೀಕ, ಪಾಂಡುರಂಗ ಬಂದು ನಿಂತಾಗ ತಂದೆ-ತಾಯಿಗೆ ನಿದ್ದೆ ತಪ್ಪಿತೆಂದು ಇಲ್ಲೇ ನಿಂತಿರುವ ಎಂದು ಇಟ್ಟಿಗೆಯನ್ನು ತಳ್ಳಿದರು. ಪಾಂಡುರಂಗ ಅದರ ಮೇಲೆ ನಿಂತು ನಿಂತು ಸಾಕಾಯಿತು ಸೊಂಟದ ಮೇಲೆ ಕೈಯಿಟ್ಟುಕೊಂಡಾಗ, ಎದ್ದು ಬಂದ ಪುಂಡರೀಕ, ಕಲಿಯುಗ ಮುಗಿಯುವ  ತನಕ ಹೀಗೆ  ನಿಂತುಬಿಡು ಸ್ವಾಮಿ ಎಂದ.  ಭಕ್ತ ಪುಂಡರೀಕನ ಮಾತಿಗೆ ಕಟ್ಟುಬಿದ್ದು,"ಪುಂಡರೀಕ' ನಾಗಿ ಬಂದ ಕೃಷ್ಣ 'ಪಾಂಡುರಂಗ ವಿಠಲ' ಎನಿಸಿಕೊಂಡು ಅಲ್ಲೆ ನಿಂತನು. ಹೀಗೆ ಭಕ್ತರ ಪುಂಡರೀಕ 'ಪಾಂಡುರಂಗ' ಇಟ್ಟಿಗೆ ದಾಸ. 


೧೦. ಶಿಷ್ಟ ದಾಸ:- ರಾವಣ ಕುಂಭಕರ್ಣರ ತಮ್ಮನಾಗಿ ಜನಿಸಿ, ದೈತ್ಯರ ನಡುವೆಯಿದ್ದ, 'ವಿಭೀಷಣ' ರಾಮನಿಗೆ ,ಹನುಮನಿಗೆ ಶರಣಾಗತನಾದ. ವಿಭೀಷಣನನ್ನು ಸ್ವೀಕಾರ ಮಾಡಲೆ, ಅಂತ ರಾಮ ಕೇಳಿದಾಗ, ಹನುಮಂತನು ಸ್ವೀಕರಿಸು ಎಂದ 'ಶಿಷ್ಟ ದಾಸ ವಿಭೀಷಣ' . 


೧೧. ನಿಷ್ಠ ದಾಸ :- ಏಕಾದಶಿ ವ್ರತ ಮಾಡುವ , ರುಕ್ಮಾಂಗದ, 'ಅಂಬರೀಶನು' ನಿಷ್ಠ ದಾಸ. 


೧೨. ಭ್ರಷ್ಟ ದಾಸ:- ಬ್ರಾಹ್ಮಣನಾಗಿದ್ದು,  ಮಾಡಬೇಕಾದ್ದನ್ನು ಮಾಡದೆ, ವೇಷ್ಯಾ ಸ್ತ್ರೀ ಹಿಂದೆ ಹೋಗಿ, ತಿನ್ನಬಾರದ್ದನ್ನು ತಿಂದು, ಕುಡಿಯಬಾರದು ಕುಡಿದು,ಮಾಡಬಾರದ್ದನ್ನು ಮಾಡಿ, ಅಂತ್ಯಕಾಲದಲ್ಲಿ ಜ್ಞಾನೋದಯವಾಗಿ, ದೀರ್ಘಕಾಲದವರೆಗೂ  ಹರಿಸ್ಮರಣೆ ಮಾಡಿ, ವಿಷ್ಣುದೂತರು ಬಂದು ಕರೆದುಕೊಂಡು ಹೋದ 'ಅಜಾಮಿಳ' ಭ್ರಷ್ಟ ದಾಸ. 


೧೩. ವಿತ್ತ ದಾಸ:-'ನವಕೋಟಿ ನಾರಾಯಣ' ಎಂದೆನಿಸಿ ಬಿಡಿಗಾಸನ್ನು ಬಿಚ್ಚಿದೆ ಬೇಡಿ ಬಂದ ಹರಿಗೆ ಆರು ತಿಂಗಳು ಸತಾಯಿಸಿ  ಕಾಸು ಕೊಡದೆ, ಪತ್ನಿಯ ಮೂಲಕ ಜ್ಞಾನದ ಅರಿವಾಗಿ, ಬಿಡಿಗಾಸನ್ನು ಇಟ್ಟುಕೊಳ್ಳದೆ ಇಡೀ ಮನೆ ಸಮೇತ ತುಳಸಿದಳ ಹಾಕಿ, ಶ್ರೀಕೃಷ್ಣಾರ್ಪಣ ಎಂದು ಹೇಳಿ ಹೆಂಡತಿ-ಮಕ್ಕಳೊಂದಿಗೆ ಹೋಗಿ ವ್ಯಾಸರಿಗೆ ಶರಣಾದ 'ಪುರಂದರದಾಸ' ವಿತ್ತ ದಾಸ . 


೧೪. ಹುತ್ತ ದಾಸ :- ನಾರದರಿಂದ ರಾಮ ಮಂತ್ರ ಉಪದೇಶ ಪಡೆದು, ತಪಸ್ಸಿಗೆ ಕುಳಿತು ಮೈಮೇಲೆ ಹುತ್ತಾ ಬೆಳೆದರೂ ತಿಳಿಯದೆ, ರಾಮ ನಾಮ ಜಪವನ್ನು  ಬಿಡದೆ ಜಪಿಸುತ್ತಲೇ ಇದ್ದಾಗ ಬ್ರಹ್ಮನು ಬಂದು ಕಮಂಡಲದಲ್ಲಿ ನೀರನ್ನು ಪ್ರೋಕ್ಷಿಸಿ  ಹುತ್ತವನ್ನು ಕರಗಿಸಿ, ನಾರದರ ಆಣತಿಯಂತೆ ರಾಮಾಯಣ ಬರೆದಿರುವ 'ವಾಲ್ಮೀಕಿ' ಹುತ್ತ ದಾಸ. 


೧೫. ಶ್ರೇಷ್ಠ ದಾಸ:- ತಂದೆ ಶಂತನು ಮಹಾರಾಜನಿಗೆ ಕೊಟ್ಟಮಾತಿನಂತೆ, ಆ ಜನ್ಮ ಬ್ರಹ್ಮಚಾರಿಯಾಗಿ, ಇಚ್ಛಾಮರಣಿ ಯಾಗಿ, ದೃತರಾಷ್ಟನಿಗೆ, ನಿಷ್ಠನಾಗಿ ಅನ್ನ ತಿಂದ  ಋಣದಿಂದಾಗಿ, ದುರ್ಯೋಧನನ ಕಟು ಮಾತು, ಅಧರ್ಮದ,

ಕೆಲಸಗಳನ್ನು ನೋಡಿಯೂ, ಅಸಹಾಯಕತೆಯಿಂದ  ಕೌರವರ ಜೊತೆಯಲ್ಲಿಯೇ ಇದ್ದು, ವಯೋವೃದ್ಧಮಹಾಜ್ಞಾನಿ ಯಾಗಿ,ಜೀವನದ ಅಂತ್ಯದವರೆಗೂ ಬದುಕನ್ನು ಹೋರಾಟದಲ್ಲೇ  ಕಳೆದು 'ಕೃಷ್ಣನ 'ಅನುಗ್ರಹ ಪಡೆದು, ಇಚ್ಛಾಮರಣಿಯಾದ, 'ದೇವ ವ್ರತ  ಭೀಷ್ಮ' ಶ್ರೇಷ್ಠ ದಾಸ.


'ಶಂಕುಕರ್ಣ' ಎಂಬವರು ಬ್ರಹ್ಮದೇವನ ಶಾಪದಿಂದ ಭೂಲೋಕದಲ್ಲಿ ಶ್ರೀ ಪ್ರಹ್ಲಾದರಾಜರ ಅವತಾರಿಗಳಾದ ಶ್ರೀ ವ್ಯಾಸರಾಜರ ಶಿಷ್ಯ, ಈ ಶೋಡಶ ದಾಸರುಗಳ ದಾಸಾನು ದಾಸಿಯರ  ಮಂಕು ದಾಸರ ಮನೆಯ ಶಂಕು ದಾಸ,  ಬಾಡದಾದಿ  ಕೇಶವ, ಕಾಗಿನೆಲೆಯಾದಿ ಕೇಶವನ. ದಾಸಾನು ದಾಸ ನಾನು 'ಕನಕದಾಸ' ಎಂದು, ತಿಳಿಸಲು ದಾಸರುಗಳು, ಮತ್ತು ಅವರ ಶ್ರೇಷ್ಠತೆ ತಿಳಿಸುವ ಮೂಲಕ ಒಂದು 'ಮುಂಡಿಗೆಯನ್ನೆ' ಮಾಡಿದರು. ಜನಪದ ಶೈಲಿಯಲ್ಲಿ  ಒಗಟುಗಳು  ಎನ್ನಬಹುದು. ಮುಂಡಿಗೆಗಳು  ಹರಿದಾಸ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆಯಾಗಿದೆ. ಇದು ಭೂರಿಬೋಜನದಂತೆ  ಸವಿಯಾಗಿದೆ. 


"ಧ್ಯಾನೌ ಕೃತಯುಗದಿ, ಯಜ್ಞ ಯಜಾನೌ ತ್ರೇತಾಯುಗದಿ, ದಾನವಾಂತಕನ  ದೇವತಾರ್ಚನೆಯು  ಕಲಿಯುಗದಿ,ಗಾನದಿ ಕೇಶವನೆಂದರೆ ಕೈ ಗೂಡುವನು  ಕಲಿಯುಗದಿ ರಂಗವಿಠಲ". 


"ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವರಿಗೆ

ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ 

ಮರೆಯದಲೆ  ಹರಿಯನಾಮ ಬರೆದು

ಓದಿ  ಪೇಳ್ದವರಿಗೆ ಕರೆದು ಮುಕ್ತಿ ಕೊಡುವ

ನಮ್ಮ ನೆಲೆಯಾದ ಕೇಶವ".

                           ಶ್ರೀಕೃಷ್ಣಾರ್ಪಣಮಸ್ತು.

Thursday, November 25, 2021

ಕಥೆಗಳು

                                                ದಿನಕ್ಕೊಂದು ಕಥೆ


                                   "ಭಾಗ್ಯ ದೇವತೆಯ ಹಿರಿಮೆ "


ಒಬ್ಬ ಬ್ರಾಹ್ಮಣ ಹಾಗೂ ಒಬ್ಬ ಹೊಗಳು ಭಟ್ಟ ಇಬ್ಬರೂ ಸ್ನೇಹಿತರು. ಒಮ್ಮೆ ಅವರ ಮಧ್ಯೆ ದೇವರು ದೊಡ್ಡವನೇ ರಾಜ ದೊಡ್ಡವನೇ ಎಂಬ ವಿಚಾರದಲ್ಲಿ ಘೋರ ಚರ್ಚೆಯೇ ತಲೆದೋರಿತು. "ಈ ದೇಶದ ರಾಜ ಮಹಾ ಉದಾರಿ. ಅವನು ಕೊಟ್ಟಾಗಲೇ ನಮಗೆ ಲಾಭ. ದೇವರು ಎಲ್ಲಾದರೂ ನಮ್ಮೆದುರು ಬಂದು ಕೊಡುತ್ತಾನೇನು?" ಹೊಗಳು ಭಟ್ಟ ರಾಜನನ್ನು ಬಹಳಷ್ಟು ಪ್ರಶಂಸಿಸಿದ.


"ದೇವರು ಖಂಡಿತ ದೊಡ್ಡವನೇ. ಅವನ ಅಪ್ಪಣೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು. ರಾಜನೂ ದೇವರ ಅಧೀನನೇ. ದೇವರು ಕೊಡಬೇಕಲ್ಲದೆ ರಾಜನ ಕೊಡುವುದು ಎಂಬುದು ಬರಿಯ ಭ್ರಮೆ" ಎಂದ ಬ್ರಾಹ್ಮಣ. ಟಇಬ್ಬರೂ ರಾಜಸಭೆಗೆ ಬಂದರು. ತಮ್ಮ ತಮ್ಮ ವಾದವನ್ನು ರಾಜನ ಮುಂದೆ ಅಳುಕಿಲ್ಲದೆ ಮಂಡಿಸಿದರು. ರಾಜ ಒಂದು ಕ್ಷಣ ಯೋಚಿಸಿ ಮಂತ್ರಿಯನ್ನು ಕರೆದು ಏನೋ ಪಿಸುಗುಟ್ಟಿದ. ಒಂದೆರಡು ಕ್ಷಣದಲ್ಲೇ ಮಂತ್ರಿ ಸೇವಕನೊಂದಿಗೆ ಬಂದ.


ಬ್ರಾಹ್ಮಣನಿಗೆ ಅಕ್ಕಿ, ಬೇಳೆ ಇತ್ಯಾದಿ ಊಟದ ವಸ್ತುಗಳನ್ನೂ, ಹೊಗಳು ಭಟ್ಟನಿಗೆ ಒಂದು ದೊಡ್ಡ ಕುಂಬಳಕಾಯಿಯನ್ನೂ ಕೊಟ್ಟು ಇಬ್ಬರೂ ನದಿತೀರದಲ್ಲಿ ಊಟಮಾಡಿ ಸೇವಿಸಿ ಸಂಜೆ ಮನಃ ಭೇಟಿ ಮಾಡಬೇಕು. ಆಗ ನಿಮಗೇ ನಿಖರವಾದ ಉತ್ತರ ಸಿಗುತ್ತದೆ' ಎಂದು ಆಜ್ಞೆ ಮಾಡಿದ.


ಇಬ್ಬರೂ ನದಿ ತೀರಕ್ಕೆ ಬಂದರು. ಹೊಗಳು ಭಟ್ಟ ತಕ್ಷಣವೇ ಹೇಳಿದ "ಮಿತ್ರ, ನನ್ನ ದೇಹದಲ್ಲಿ ವಾಯುಪ್ರಕೋಪವಿದೆ. ಕುಂಬಳಕಾಯಿ ತಿಂದರೆ ನನ್ನ ಹೊಟ್ಟೆ ಉಬ್ಬರಿಸುತ್ತದೆ, ಅಜೀರ್ಣವಾಗುತ್ತದೆ. ಹಾಗಾಗಿ ಇದನ್ನು ನೀನಿಟ್ಟುಕೋ. ನಿನ್ನಲ್ಲಿರುವ ಅಕ್ಕಿ, ಬೇಳೆ ನನಗೆ ಕೊಡು" ಎಂದನು.


ಬ್ರಾಹ್ಮಣ ಸಂತೋಷದಿಂದಲೇ ಅದಲುಬದಲು ಮಾಡಿಕೊಂಡ. ತನ್ನ ಕೈಯಲ್ಲಿರುವ ಕುಂಬಳಕಾಯಿಯನ್ನು ಒಡೆದ. ಅದರಿಂದ ಹೇರಳ ಮುತ್ತುರತ್ನ ಉದುರಿದವು. ಬ್ರಾಹ್ಮಣ ತಕ್ಷಣ ಯೋಚಿಸಿದ “ಬಹುಶಃ ರಾಜನು ಈ ಸಂಪತ್ತನ್ನು ಭಟ್ಟನಿಗೆ ಕೊಡಲು ಯೋಚಿಸಿರಬೇಕು. ದೇವರು ನನಗೇನೇ ಕೊಡಿಸಿದ" ಎನ್ನುತ್ತಲೇ ಒಂದು ಶಾಲಿನಲ್ಲಿ ಕಟ್ಟಿಕೊಂಡ.


ಇಬ್ಬರೂ ಸಂಜೆ ರಾಜನ ಭೇಟಿ ಮಾಡಿದರು. ರಾಜನು ಗಂಭೀರನಾಗಿ ಹೇಳಿದ "ಕೊನೆಗಾದರೂ ಬ್ರಾಹ್ಮಣ... ನಿನಗೆ ತಿಳಿಯಿತೇ? ದೇವರು ಐಶ್ವರ್ಯ ಕೊಡುವುದಲ್ಲ, ಐಶ್ವರ್ಯ ಬೇಕೆಂದರೆ ರಾಜನೇ ಕೃಪೆದೋರಬೇಕು ಎಂಬ ಸತ್ಯ ಮನದಟ್ಟಾಯಿತೇ?”


ಬ್ರಾಹ್ಮಣ ರಾಜನಿಗೆ ನಡೆದ ಸಂಗತಿಯನ್ನು ತಿಳಿಸಿ ಬಟ್ಟೆಯಲ್ಲಿ ಕಟ್ಟಿ ತಂದಿದ್ದ. ಸಂಪತ್ತನ್ನೆಲ್ಲ ರಾಜನ ಮುಂದಿಟ್ಟ. ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಬ್ರಾಹ್ಮಣನಿಗೇ ಸಂತೋಷದಿಂದಲೆ ಆ ಉಡುಗೊರೆಯನ್ನು ಕೊಟ್ಟೇ ಬಿಟ್ಟ.


ನೀತಿ :-- ದೈವಕೃಪೆಗೆ ಇತಿಮಿತಿ ಇಲ್ಲ. ದೈವೇಚ್ಛೆಯನ್ನು ವರ್ಣಿಸಲು ಸಾಧ್ಯವಿಲ್ಲ. ದೇವರಿಗೆ ಪಕ್ಷಪಾತ ಎಂಬುದಿಲ್ಲ ಎಂಬುದು ಮರೆಯಬಾರದು.



                                          ಸಕಾರಾತ್ಮಕ ಯೋಚನೆ 


ಮಹಿಳೆಯೊಬ್ಬಳು ತನ್ನ ದಿನದ ಸಂತೋಷವನ್ನು ಪ್ರತಿದಿನ ಮಲಗುವ ಮೊದಲು ಕಾಗದದ ಮೇಲೆ ಬರೆಯುತ್ತಿದ್ದಳು ... ಒಂದು ರಾತ್ರಿ ಅವಳು ಹೀಗೆ ಬರೆದಳು:

"ನಾನು ಖುಷಿಯಾಗಿದ್ದೇನೆ"


ನನ್ನ ಪತಿ ರಾತ್ರಿಯಿಡೀ ಜೋರಾಗಿ ಗೊರಕೆ ಹೊಡೆಯುತ್ತಾರೆ ಎಂಬುದು ನನಗೆ ಸಂತೋಷದ ವಿಷಯ, ಏಕೆಂದರೆ ಅವನು ಸುಖವಾಗಿದ್ದಾನೆ ಮತ್ತು ಅವನು ನನ್ನ ಬಳಿ ಇದ್ದಾನೆ. ಇದಕ್ಕಾಗಿ ದೇವರಿಗೆ ಧನ್ಯವಾದ..

ನಾನು ಖುಷಿಯಾಗಿದ್ದೇನೆ

ನನ್ನ ಮಗನದು ದಿನಾ ಬೆಳಿಗ್ಗೆ ಒಂದೇ ದೂರು ರಾತ್ರಿಯಿಡೀ ಸೊಳ್ಳೆಗಳು ಮತ್ತು ಕೀಟಗಳು ಮಲಗಲು ಬಿಡುವುದಿಲ್ಲ ಎಂಬ ವಿಷಯದಲ್ಲಿ ಎಂದು ನನಗೆ ಸಂತೋಷವಾಗಿದೆ. ಅಂದರೆ, ಅವನು ರಾತ್ರಿಯನ್ನು ಮನೆಯಲ್ಲಿ ಕಳೆಯುತ್ತಾನೆ, ಮತ್ತು ಅಲ್ಲಿ ಇಲ್ಲಿ ತಿರುಗಾಡಲು ಹೋಗುವುದಿಲ್ಲ. ಧನ್ಯವಾದ ದೇವರೆ..

ನಾನು ಖುಷಿಯಾಗಿದ್ದೇನೆ

 ಪ್ರತಿ ತಿಂಗಳು, ವಿದ್ಯುತ್, ಗ್ಯಾಸ್, ಪೆಟ್ರೋಲ್, ನೀರು ಇತ್ಯಾದಿಗಳಿಗೆ ಸಾಕಷ್ಟು ಹಣ ಪಾವತಿಸಬೇಕಾಗುತ್ತದೆ. ಅಂದರೆ, ಈ ಎಲ್ಲಾ ವಸ್ತುಗಳು ನನ್ನ ಬಳಿ ಇವೆ, ಮತ್ತು ನನ್ನ ಬಳಕೆಯಲ್ಲಿವೆ. ಇದು ಇಲ್ಲದಿದ್ದರೆ, ಜೀವನ ಎಷ್ಟು ಕಷ್ಟ? ಧನ್ಯವಾದ ದೇವರೆ..

ನಾನು ಖುಷಿಯಾಗಿದ್ದೇನೆ

 ದಿನದ ಕೊನೆಗೆ ನನಗೆ ಆಯಾಸವಾಗುತ್ತದೆ ನಿಜ, ಅಂದರೆ ದಿನವಿಡೀ ಕಷ್ಟಪಟ್ಟು ದುಡಿಯುವ ಶಕ್ತಿ ಮತ್ತು ಧೈರ್ಯ ನನ್ನಲ್ಲಿದೆ, ದೇವರ ದಯೆಯಿಂದ ಮಾತ್ರ ಇದು ಸಾಧ್ಯವಾಗಿದೆ.

ನಾನು ಖುಷಿಯಾಗಿದ್ದೇನೆ

ಪ್ರತಿದಿನ ನನ್ನ ಮನೆಯನ್ನು ಸ್ವಚ್ಛ ಮಾಡಬೇಕು ಅಲ್ಲದೇ, ಬಾಗಿಲು ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸಬೇಕು ಎಂಬದು  ನನಗೆ ಸಂತೋಷದ ವಿಷಯ. ಅದೃಷ್ಟವಶಾತ್, ನನಗೆ ಮನೆ ಇದೆ. ಸೂರು ಇಲ್ಲದವರ ಗತಿಯೇನು? ಧನ್ಯವಾದಗಳು ದೇವರೇ, ಧನ್ಯವಾದಗಳು..

ನಾನು ಖುಷಿಯಾಗಿದ್ದೇನೆ

 ಕೆಲವೊಮ್ಮೆ, ನಾನು ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗುತ್ತೇನೆ. ಅಂದರೆ, ನಾನು ಹೆಚ್ಚಾಗಿ ಆರೋಗ್ಯವಾಗಿರುತ್ತೇನೆ. ಧನ್ಯವಾದಗಳು ದೇವರೇ, ಧನ್ಯವಾದಗಳು..

ನಾನು ಖುಷಿಯಾಗಿದ್ದೇನೆ

 ಪ್ರತಿ ವರ್ಷ ಹಬ್ಬ ಹರಿದಿನಗಳನ್ನು ಅದ್ಧೂರಿಯಾಗಿ ಆಚರಿಸುವಾಗ, ಉಡುಗೊರೆಗಳನ್ನು ನೀಡುವಾಗ ಪರ್ಸ್ ಖಾಲಿಯಾಗುತ್ತದೆ. ಅಂದರೆ, ನನಗೆ ಪ್ರೀತಿಪಾತ್ರರು, ನನ್ನ ಹಿತೈಷಿಗಳು, ಸಂಬಂಧಿಕರು, ಸ್ನೇಹಿತರು, ನನ್ನ ಸ್ವಂತದವರು ಯಾರಿಗೆಲ್ಲಾ ನಾನು ಉಡುಗೊರೆಗಳನ್ನು ನೀಡಬಹುದು?  ಅದಿಲ್ಲದಿದ್ದರೆ ಜೀವನ ಎಷ್ಟು ನೀರಸ..? ಧನ್ಯವಾದಗಳು ದೇವರೇ, ಧನ್ಯವಾದಗಳು..


ನಾನು ಖುಷಿಯಾಗಿದ್ದೇನೆ ಎಂದು ಪ್ರತಿದಿನ ಅಲಾರಾಂ ಶಬ್ದ ಕೇಳಿದ ಮೇಲೆ 

 ಎದ್ದೇಳುತ್ತೇನೆ. ಅಂದರೆ, ಪ್ರತಿದಿನ, ನಾನು ಹೊಸ ಬೆಳಿಗ್ಗೆ ನೋಡುತ್ತೇನೆ. ಇದು ಕೂಡ ದೇವರ ವರವ

ಈ ಜೀವನ ಸೂತ್ರವನ್ನು ಅನುಸರಿಸಿ, ತನ್ನ ಮತ್ತು ತನ್ನ ಜನರ ಜೀವನ ಸುಖಮಯವಾಗಿರಲಿ  ಮತ್ತು  ಶಾಂತಿ ನೆಮ್ಮದಿ ಇರಲಿ ಎಂದು ಬಯಸೋಣ... ಚಿಕ್ಕದೋ ದೊಡ್ಡದೋ ಕಷ್ಟದಲ್ಲಿಯೂ ಸುಖವನ್ನು ಹುಡುಕು, ಅದೇನೇ ಇರಲಿ, ಆ ದೇವರಿಗೆ ಕೃತಜ್ಞತೆ ಸಲ್ಲಿಸಿ, ಜೀವನ ಸುಖಮಯವಾಗಿರಲಿ..!!


#Spardha Bharathi Karunadu

Sunday, November 21, 2021

ಕಥೆಗಳು

                                                           ದಿನಕ್ಕೊಂದು ಕಥೆ                                

ಅಮೂಲ್ಯ ಬದುಕು


ಅವನೊಬ್ಬ ಭಾರಿ ಶ್ರೀಮಂತ. ಶ್ರೀಮಂತಿಕೆ ಏನೇನು ವಸ್ತುಗಳನ್ನು ತೋರಿ­ಸ­ಬಹುದೋ ಎಲ್ಲವೂ ಅವನ ಬಳಿ­ಯಲ್ಲಿದ್ದವು. ಅನೇಕ ಅರಮನೆ­ಗಳಂಥ ಮನೆ­ಗಳು, ನೂರಾರು ಕಾರು­ಗಳು, ಅತ್ಯಂತ ಶ್ರೀಮಂತ ಕ್ಲಬ್‌ಗಳ ಸದಸ್ಯತ್ವ ಅವ­ನಲ್ಲಿ ಇದ್ದವು.  ಅವನು ವಾಸ­ವಾಗಿದ್ದುದು ದೇಶದ ರಾಜ­ಧಾನಿಯ ಅತ್ಯಂತ ಸಿರಿ­ವಂತರ ಬಡಾ­ವಣೆಯಲ್ಲಿ. ಅಲ್ಲಿಯೂ ಇವನದೇ ದೊಡ್ಡ ಮನೆ.


ಸುಮಾರು ಐದು ಎಕರೆಯಷ್ಟು ಜಮೀನಿನಲ್ಲಿ ನಲವತ್ತು ಕೊಠಡಿಗಳಿದ್ದ ಅರಮನೆ ಅದು. ಅದರ ಮುಂದೆ ವಿಶಾಲವಾದ ಹೂದೋಟ, ಅದರಲ್ಲಿ ಬಣ್ಣ ಬಣ್ಣದ ನೀರಿನ ಕಾರಂಜಿ­­ಗಳು. ರಾತ್ರಿಯಿಡೀ ಹೂದೋಟಗಳನ್ನು ಬೆಳಗಿಸುವ ಕಾಲುದೀಪಗಳು. ಈ ಮನೆಯನ್ನು ಸರಿಯಾಗಿ ಇಡುವುದಕ್ಕೆ ನೂರಾರು ಸೇವಕರು, ಅಡಿಗೆಯವರು. ಹೀಗೆ ಸಕಲ ಸೌಭಾಗ್ಯಗಳು ಆತನಿಗಿದ್ದವು. ಅವನಿಗೆ ಇವೆಲ್ಲ ಚಿಕ್ಕವಯಸ್ಸಿನಲ್ಲಿಯೇ ದೊರೆತಿದ್ದವು. ಅವನಿಗೊಬ್ಬನೇ ಮಗ. ಆತನಿಗೆ ಸುಮಾರು ಹತ್ತು ವರ್ಷ.


ಈ ಹುಡುಗನ ಮನಸ್ಸು ಬಲುಸೂಕ್ಷ್ಮ. ಸದಾ ಆತ ಹೊಸ ವಿಷಯಗಳನ್ನು, ಹೊಸ ರೀತಿಯಲ್ಲಿ ಗಮನಿಸುವನು. ಒಂದು ಬಾರಿ ತಂದೆ ಯೋಚಿಸಿದ. ನನ್ನ ಮಗ ಸದಾಕಾಲ ಶ್ರೀಮಂತಿಕೆಯಲ್ಲೇ ಹುಟ್ಟಿ ಬೆಳೆದವನು. ಅವನಿಗೆ ಬಡತನ ಎಂದರೆ ಹೇಗಿರುತ್ತದೆ ಎಂಬುದನ್ನು ತೋರಿಸಿದರೆ ಶ್ರೀಮಂತಿಕೆಯ ಬೆಲೆ ಅರ್ಥವಾಗುತ್ತದೆ. ಅದರೊಂದಿಗೆ ತನ್ನ ತಂದೆಯ ಸಾಧನೆಯೂ ಅರಿವಾಗುತ್ತದೆ. ಹೀಗೆ ಯೋಚಿಸಿ ಮಗ­ನನ್ನು ಕರೆದುಕೊಂಡು ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗ­ದವರು ವಾಸಿಸುತ್ತಿದ್ದ ಅರಣ್ಯ­ಪ್ರದೇಶಕ್ಕೆ ಹೋದ. ಅಲ್ಲಿಯ ಜನರಿಗೆ ಮನೆ ಎಂಬುದೇ ಇಲ್ಲ. ಗುಡಿಸಲು ಇದ್ದರೆ ಇತ್ತು, ಇಲ್ಲದಿದ್ದರೆ ಆಕಾಶವೇ ಮನೆ. ಅವರಲ್ಲಿ ಹಿರಿ­ಯರ ಹತ್ತಿರ ಮಾತನಾಡಿ ತನ್ನ ಮಗನನ್ನು ಒಂದು ವಾರ ಇಟ್ಟು­ಕೊಳ್ಳುವಂತೆ ಕೇಳಿ ಮಗನನ್ನು ಅಲ್ಲಿಯೇ ಬಿಟ್ಟು ಬಂದ.


ಒಂದು ವಾರದ ನಂತರ ಮಗನನ್ನು ಕರೆತಂದ. ಮಗ ಎಲ್ಲಿ ಬೇಜಾರಿನಲ್ಲಿ ಇರುತ್ತಾನೋ ಎಂದು ಚಿಂತಿ­ಸಿದ್ದ ತಂದೆಗೆ ಆಶ್ಚರ್ಯ. ಮಗ ಗೆಲುವಾಗಿಯೇ ಇದ್ದ. ಮಗನನ್ನು ಕೇಳಿದ, ‘ಮಗೂ ಒಂದು ವಾರ ಅಲ್ಲಿದ್ದದ್ದು ನಿನಗೆ ಹೇಗೆನಿಸಿತು?’. ‘ತುಂಬ ಅದ್ಭುತವಾಗಿತ್ತಪ್ಪ’. ‘ಬಡತನ ಹೇಗಿರುತ್ತದೆ, ಬಡವರು ಹೇಗೆ ಬದು­ಕು­ತ್ತಾರೆ ತಿಳಿಯತಲ್ಲವೇ?’, ‘ಹೌದಪ್ಪ, ನಾವು ಎಷ್ಟು ಬಡವರು ಎಂಬುದು ತಿಳಿ­ಯಿತು’ ಎಂದ ಮಗ. ‘ನಾವು ಬಡವರೇ? ಅವರು ಬಡವರ­ಲ್ಲವೇ?‘ ಆಶ್ಚರ್ಯ­ದಿಂದ ಕೇಳಿದ ತಂದೆ. ‘ಅಪ್ಪಾ, ನಾವೇ ಬಡವರು, ನಮ್ಮ ಮನೆ ಕಾಯಲು ನಾಲ್ಕು ನಾಯಿಗಳಿವೆ, ಆದರೆ ಅವರ ಮನೆಯ ಮುಂದೆ ನೂರಾರು ನಾಯಿಗಳು.


ನಮ್ಮ ಮನೆಗೆ ಗೋಡೆಗಳ ಬಂಧನವಿದೆ, ಅವರ ಮನೆಗೆ ಗೋಡೆಗಳೇ ಇಲ್ಲ. ನಮ್ಮ ಮನೆ ತೋಟದಲ್ಲಿ ನೀರಿನ ಕಾರಂಜಿ ಇದೆ, ಅವರ ಮನೆಯ ಮುಂದೆ ನದಿಯೇ ಇದೆ. ನಮ್ಮ ಬಂಗಲೆಯ ತೋಟವನ್ನು ಬೆಳಗಿಸಲು ನೂರಾರು ವಿದ್ಯುತ್ ದೀಪಗಳಿವೆ, ಅವರ ತೋಟ ಬೆಳಗಿಸಲು ಅಸಂಖ್ಯೆ ತಾರೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಅದು ಬೇಕು, ಇದು ಬೇಕು ಎಂಬ ಆಸೆಗಳಿವೆ. ಆದರೆ, ಅವರಿಗೆ ಆಸೆಗಳ ಆಸೆಯೇ ಇಲ್ಲ. ಅವರು ತುಂಬ ನಿರಾಳವಾಗಿದ್ದಾರೆ, ನಮಗಿಂತ ಹೆಚ್ಚು ಸುಖಿಗಳಾಗಿದ್ದಾರೆ. ಆದ್ದರಿಂದ ನಮಗಿಂತ ಅವರೇ ಶ್ರೀಮಂತರು’ ಎಂದ ಮಗ. ಅಪ್ಪ ಮಗನ ಮಾತಿಗೆ ಬೆರಗಾದ.


‘ಅಪ್ಪ, ನಾವು ಎಷ್ಟು ಬಡವರು ಎಂದು ತಿಳಿಸಿದ್ದಕ್ಕೆ ನಿನಗೆ ಧನ್ಯವಾದ­ಗಳು’ ಎಂದು ನುಡಿದ ಮಗ. ನಾವು ನೋಡುವ ದೃಷ್ಟಿ ವಸ್ತುಸ್ಥಿತಿ­ಯನ್ನು ಬದ­ಲಿಸು­­­ತ್ತದೆ. ನಮ್ಮಲ್ಲಿ ಸಂತೋಷ, ತೃಪ್ತಿ, ಹಾಸ್ಯ ಮನೋ­ಭಾವ, ಆತ್ಮಗೌರವ­ವಿದ್ದರೆ ಅದಕ್ಕಿಂತ ಶ್ರೀಮಂತಿಕೆ ಬೇರೆಯಿಲ್ಲ. ಯಾಕೆಂದರೆ ಇವು ಯಾವುದನ್ನು ಹಣ ಕೊಂಡು­ಕೊಳ್ಳಲಾರದು. ನಿಮ್ಮಲ್ಲಿ ಸಾಕಷ್ಟು ಹಣವಿದ್ದು ತೃಪ್ತಿ, ಸಂತೋಷಗಳಿಲ್ಲ­ದಿದ್ದರೆ ನಿಮಗಿಂತ ಬಡವರು ಮತ್ತಾರೂ ಇಲ್ಲ. ಅಮೂಲ್ಯ ಎಂದರೆ ಯಾವುದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲವೋ ಅದು. ನಮ್ಮ ಜೀವನ ಅಮೂಲ್ಯವಾಗುವುದು ಯಾವಾಗ ಗೊತ್ತೇ? ಎಂದು ಪ್ರಪಂಚದ ಯಾವ ಶಕ್ತಿಯೂ, ಆಸೆಯೂ, ಧನವೂ ನಮ್ಮ ಆತ್ಮಗೌರವವನ್ನು ಕೊಂಡು­ಕೊಳ್ಳಲು ಅಸಮರ್ಥವಾ­ಗುತ್ತದೆಯೋ ಅಂದೇ ನಮ್ಮ ಬದುಕು ಅಮೂಲ್ಯ­ವಾಗುತ್ತದೆ, ಅಪಾರ ಶ್ರೀಮಂತವಾಗು­ತ್ತದೆ. 


                                                              ದಿನಕ್ಕೊಂದು ಕಥೆ 

  ಕ್ಷಣಿಕ ಆಸೆ


ಗುರುಗಳು ಬಹುದೊಡ್ಡ ಸಾಧಕರು. ಸದಾಕಾಲ ಎಚ್ಚರದಲ್ಲೇ ಇದ್ದು   ತಮ್ಮ ಶಿಷ್ಯರನ್ನು ಅದೇ ಎಚ್ಚರದಲ್ಲಿ ಬೆಳೆಸು­ತ್ತಿದ್ದರು. ಅವರ ಶಿಸ್ತು ಬಹಳ ಕಠಿಣ­ವಾಗಿತ್ತು. ಅಕಸ್ಮಾತ್ ಯಾರಾದರೂ ಅದನ್ನು ಪಾಲಿಸದಿದ್ದರೆ ಬಹಳ ಉಗ್ರರಾಗುತ್ತಿದ್ದರು. ಆತ್ಮಾನಂದ ಅವರ ಹಿರಿಯ ಶಿಷ್ಯ. ಆತನೂ ಮಹಾನ್ ಸಾಧಕನೇ. ಅವನು ಗುರುಗಳಿಂದ ಮತ್ತು ಸಾಧನೆಯಿಂದ ಅನೇಕ ಅದ್ಭುತ ಶಕ್ತಿಗಳನ್ನು ಸಂಪಾದಿಸಿಕೊಂಡಿದ್ದ ಎಂದು ಹೇಳುತ್ತಿದ್ದರು. ಆತ್ಮಾನಂದ ಪ್ರವಾಸಕ್ಕೆ ಹೊರಟಿದ್ದ. ಅವನು ಕಾಡಿನ ಮಧ್ಯೆ ಹೋಗುವ ಪ್ರಸಂಗ ಬಂದಿತು. ಆಗ ಊರಿನವರೆಲ್ಲ ಅಲ್ಲಿಗೆ ಹೋಗಬೇಡಿ ಎಂದು ಒತ್ತಾಯಿಸಿದರು. ಯಾಕೆಂದರೆ ಅಲ್ಲಿ ಒಂದು ದೇವಸ್ಥಾನದ ಹತ್ತಿರ ‘ಮಹಾಕಾಲ’ ಎಂಬ ದೊಡ್ಡ ಸರ್ಪವಿದೆ. ಅದರ ಶಕ್ತಿ ಅಪಾರವಾದದ್ದು. ಕಾಡಾನೆ­ಗಳು ಕೂಡ ಅದಕ್ಕೆ ಹೆದರಿ ಅಲ್ಲಿಗೆ ಹೋಗುವುದಿಲ್ಲ. ಸುತ್ತ ಮುತ್ತ ಯಾವ ಪ್ರಾಣಿಯೂ ಬರದಂತೆ ಸರ್ಪ ನೋಡಿ­ಕೊಳ್ಳುತ್ತದೆ. ನೀವು ಅಲ್ಲಿಗೆ ಹೋದರೆ ನಿಮ್ಮ ಬಲಿ ತೆಗೆದು­ಕೊಳ್ಳುವುದು ಖಂಡಿತ ಎಂದರು. ಆದರೆ ಆತ್ಮಾನಂದ ಕೇಳಿಯಾನೇ? ಹಟದಿಂದ ಆ ಮಾರ್ಗದಲ್ಲೇ ಹೊರಟ.


ದೇವಸ್ಥಾನದ ಹತ್ತಿರ ಆತ್ಮಾನಂದ ಬರುತ್ತಿದ್ದಂತೆ ‘ಮಹಾಕಾಲ’ ಸರ್ಪಕ್ಕೆ ವಾಸನೆ ಬಂದಿರಬೇಕು. ಸುರುಳಿ ಸುತ್ತಿಕೊಂಡು ಕುಳಿತಿದ್ದ ಸರ್ಪ ಎಚ್ಚರಗೊಂಡಿತು. ಆತ್ಮಾನಂದ ನೇರವಾಗಿ ಅಲ್ಲಿಗೇ ಹೋದ. ಒಂದಿಷ್ಟು ಹುಲ್ಲು ಹಾಕಿಕೊಂಡು ಅದರ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತ. ಧ್ಯಾನ ಮುದ್ರೆ­ಯಲ್ಲಿ ಮಗ್ನನಾದ. ಬುಸುಗುಡುತ್ತ ಬಂದ ಸರ್ಪ ಇವನು ಆರಾಮವಾಗಿ ಕುಳಿತದ್ದನ್ನು ನೋಡಿ ವಿಷವನ್ನು ಕಾರತೊಡಗಿತು. ಅದು ಹೊಗೆಯ ರೂಪದಲ್ಲಿ ಆತ್ಮಾನಂದನನ್ನು ಸುತ್ತಿ­ಕೊಂಡಿತು. ಆಗ ಉಸಿರು ಬಿಗಿಹಿಡಿದ ಆತ್ಮಾನಂದ ತನ್ನ ಯೋಗಶಕ್ತಿಯಿಂದ ಹಣೆಯಿಂದ ಬೆಂಕಿಯನ್ನು ಬಿಟ್ಟ. ಅದು ಹಾವಿನೆಡೆಗೆ ನುಗ್ಗಿ ಬಂತು. ಆ ಬೆಂಕಿಯ ಝಳಕ್ಕೆ ಹಾವು ಹೆದರಿತು. ಅದರ ವಿಷ ಆತ್ಮಾನಂದನನ್ನು ತಲುಪಲೇ ಇಲ್ಲ. ಆದರೆ ಅವನಿಂದ ಬರುತ್ತಿದ್ದ ಬೆಂಕಿ ಹಾವನ್ನೂ ಸುಡುತ್ತಿತ್ತು. ಆಗ ಹಾವು ಆತ್ಮಾನಂದನಿಗೆ ಶರಣಾಗಿ ಅವನ ಕಾಲಬಳಿ ಮಲಗಿಬಿಟ್ಟಿತು. ಆತ್ಮಾನಂದ ಅದನ್ನು ಕ್ಷಮಿಸಿ ಅಲ್ಲಿಂದ ಹೊರಟುಬಿಟ್ಟ.


ಕಾಡಿನಿಂದ ಹೊರಬಂದ ಆತ್ಮಾನಂದ­ನನ್ನು ಕಂಡು ಅಲ್ಲಿದ್ದ ಶಿಷ್ಯರಿಗೆ ಬಹಳ ಖುಷಿಯಾಯಿತು, ಈತನ ಸಾಧನೆಯ ಬಗ್ಗೆ ಹೆಮ್ಮೆಯಾಯಿತು. ಈ ಸಾಧನೆ­ಯನ್ನು ಸಂಭ್ರಮಿಸಲು ಮರುದಿನ ಶಿಷ್ಯರು ಭಾರಿ ಭೋಜನವನ್ನು ವ್ಯವಸ್ಥೆ ಮಾಡಿದರು. ಊಟದ ನಂತರ ಅಲ್ಲಿ ವಿಶೇಷವಾಗಿ ತಯಾರಾಗುತ್ತಿದ್ದ ಮದ್ಯವನ್ನು ಕುಡಿಸಿದರು. ಆತ್ಮಾನಂದ ಮೈಮರೆತು ಕುಡಿದ, ಉನ್ಮತ್ತನಾದ, ಎಚ್ಚರತಪ್ಪಿ ಬಿದ್ದ. ಆ ಸಂಜೆಗೇ ಗುರುಗಳು ಅಲ್ಲಿಗೆ ಬಂದರು. ಆತ್ಮಾನಂದನ ಈ ಅವತಾರವನ್ನು ನೋಡಿ ಗುರುಗಳು ಏನನ್ನುತ್ತಾರೋ ಎಂದು ಶಿಷ್ಯರು ಗಾಬರಿಯಾದರು. ಆದರೆ ಗುರುಗಳು ಮಾತನಾಡಲಿಲ್ಲ. ಗುರುಗಳನ್ನು ನೋಡಿದ ಮೇಲೆಯೂ ಆತ್ಮಾನಂದ ಅವರ ಕಡೆಗೆ ತಿರುಗಿ ನೋಡುವುದು ಹೋಗಲಿ, ಅವರ ಕಡೆಗೆ ಕಾಲು ಚಾಚಿ ಮಲಗಿಬಿಟ್ಟ. ಆಗ ಗುರುಗಳು ಶಿಷ್ಯರನ್ನು ಕೇಳಿದರು, ‘ಈಗ ಆತ್ಮಾನಂದನಿಗೆ ನನ್ನ ಬಗ್ಗೆ ಗೌರವವಿದೆಯೋ?’. ‘ಇಲ್ಲ ಗುರು­ಗಳೇ’ ಎಂದರು ಶಿಷ್ಯರು. ‘ಈಗ ಆತ್ಮಾನಂದ ‘ಮಹಾಕಾಲ’ ಸರ್ಪ ಹೋಗಲಿ, ಸಣ್ಣ ಎರೆಹುಳವನ್ನಾದರೂ ನಿಗ್ರಹಿಸಬಲ್ಲನೇ?’. ‘ಅದು ಆಗದು ಗುರುಗಳೇ’ ಎಂದರು ಶಿಷ್ಯರೆಲ್ಲ. ಆಗ ಗುರುಗಳು, ‘ಇದೇ ನೋಡಿ ಅನಾಹುತ.


ಯಾವ ಆತ್ಮಾನಂದ ನನ್ನ ಬಗ್ಗೆ ಅಪಾರ ಶ್ರದ್ಧೆ, ಗೌರವ ಇಟ್ಟುಕೊಂಡಿದ್ದನೋ ಅವನೇ ಈಗ ನನ್ನ ಕಡೆಗೆ ಕಾಲು ಚಾಚಿ ಬಿದ್ದಿದ್ದಾನೆ. ಯೋಗಸಾಧನೆಯಿಂದ ಮಹಾಸರ್ಪವನ್ನು ಮುರಿಯಬಲ್ಲ ಶಕ್ತಿ ಇದ್ದ ಆತ್ಮಾನಂದ ಈಗ ಶಕ್ತಿಹೀನನಾಗಿ ಕುಳಿತಿದ್ದಾನೆ. ಇದಕ್ಕೆ ಕಾರಣ ಈ ಮದ್ಯ. ವರ್ಷಗಟ್ಟಲೇ ಮಾಡಿದ ಸಾಧನೆ, ಶಕ್ತಿಯನ್ನು ಕ್ಷಣಕಾಲದ ಮದ್ಯದ ಆಸೆ ಮಣ್ಣುಮಾಡಿತು. ಒಂದೇ ಗಳಿಗೆ ತೃಪ್ತಿ ನೀಡುವ ಆಕರ್ಷಣೆಗಳು ಜೀವಮಾನದ ಸಾಧನೆಯನ್ನು ಹಾಳುಮಾಡುತ್ತವೆ, ಎಚ್ಚರ’ ಎಂದರು. ನಾವು ಕಂಡಿದ್ದೇವೆ ಜೀವನದಲ್ಲಿ, ನಾಲ್ಕಾರು ದಶಕಗಳ ಕಾಲ ಶ್ರಮವಹಿಸಿ ಸಾಧನೆಯ ಶಿಖರವನ್ನೇರಿ ಯಾವುದೋ ಕ್ಷುಲ್ಲಕ ಆಸೆಗಳಿಗೆ ಮನತೆತ್ತು ಪ್ರಪಾತಕ್ಕಿಳಿದ ಮಹಾನು­ಭಾವರನ್ನು. ನಾಯಕತ್ವದಿಂದ ಖಳನಾ­ಯ­ಕತ್ವಕ್ಕೆ ಬಹಳ ಅಂತರವಿಲ್ಲ. ಒಂದು ಕ್ಷುಲ್ಲಕ. ಆಕರ್ಷಣೆ ಆ ಬದಲಾವಣೆ­ಯನ್ನು ತಂದುಬಿಡುತ್ತದೆ. ಆದ್ದರಿಂದ ನಾಲಿಗೆಯ ರುಚಿಗೂ ಮತ್ತು ದೇಹದ ಆರೋಗ್ಯಕ್ಕೂ, ಕ್ಷಣಿಕಸುಖಕ್ಕೂ ಮತ್ತು ಶಾಶ್ವತ ಸಂತೃಪ್ತಿಗೂ, ವೈಯಕ್ತಿಕ ಲಾಭಕ್ಕೂ ಮತ್ತು ಸಾಮಾಜಿಕ ಸೌಖ್ಯಕ್ಕೂ ಮನಸ್ಸಿನಲ್ಲಿ ತಾಕಲಾಟ ಬಂದಾಗ ಶಾಶ್ವತವಾದದ್ದಕ್ಕೆ ಮನ ನೀಡುವುದು ಬುದ್ಧಿವಂತಿಕೆ.  

Saturday, November 20, 2021

ಕಥೆಗಳು

                                                              ದಿನಕ್ಕೊಂದು ಕಥೆ

ಬಡತನ ಸತ್ತು ಹೋದಾಗ


ಒಂದು ಬಡ ಸಂಸಾರವಿತ್ತು. ಆ ಸಂಸಾರದ ಯಜಮಾನ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾದರೆ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮುದ್ದು ಮಕ್ಕಳು. ಆದರೆ ಯಜಮಾನನಿಗೆ ಮಾತ್ರ ಕುಡಿತದ ಚಟ. ಸರಿಯಾಗಿ ಕೆಲಸಕ್ಕೆ ಹೋಗದೆ, ದಿನಾ ಕುಡಿದು ಮನೆಗೆ ಬಂದು ಲೇ ಲೇ ಹಾಕುತಿದ್ದ. ಆತನ ತಿಂಗಳ ಸಂಬಳ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಮನೆ ಗೃಹಿಣಿ ಕೆಲಸಕ್ಕೆ ಸೇರಿದಾಗ, ಅದಕ್ಕೂ ಅನುಮಾನ ಪಟ್ಟು ಬೈದು ನಿಂದನೆ ಮಾಡಿ ಕೆಲಸ ಬಿಡಿಸಿದ. ಮನೆ ಬಾಡಿಗೆ, ಮಕ್ಕಳ ವಿದ್ಯಬ್ಯಾಸ, ಮನೆ ಖರ್ಚು ಎಂಬಂತೆ, ಯಾವುದನ್ನೂ ನಿಭಾಯಿಸಲು ಸಾಧ್ಯವಾಗದೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರ ಪರಿಣಾಮ, ಅತೀವವಾದ ಬಡತನ ಅವನ ಸಂಸಾರವನ್ನು ಕಾಡುತ್ತಿತ್ತು. ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಅಂದರೆ, ಆತನ ಈ ಕುಡಿತದ ಚಟದಿಂದಾಗಿ ಬಡತನ ಅವರ ಬೆನ್ನು ಹತ್ತಿ ಕಾಡುತ್ತಿತ್ತು.

ಒಂದು ಕಡೆ ಬಾಡಿಗೆಗಾಗಿ ಮನೆ ಮಾಲೀಕರ ಕಿರುಕುಳವಾದರೆ ಇನ್ನೊಂದು ಕಡೆ ಸಾಲಗಾರರ ಕಿರುಕುಳ. ಈ ಎಲ್ಲಾ ಕಷ್ಟಗಳಿಂದ ಪಾರಾಗುದು ತುಂಬಾ ಕಷ್ಟ ಎಂದು ಭಾವಿಸಿದ ಆತನ ಹೆಂಡತಿ ' ಮರಿಯಾದೆಗೆ ಅಂಜಿದಳು. ಬದುಕಲು ಇಷ್ಟವಿಲ್ಲದೆ, ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಳು .

ಮರುದಿನ ಅವಳ ಯಜಮಾನ ಕೆಲಸಕ್ಕೆಂದು ಹೊರಟು ಹೋದ. ಮಕ್ಕಳೂ ಶಾಲೆಗೆ ಹೊರಟು ಹೋದರು. ಆ ವೇಳೆಗೆ ಮನೆಯಲ್ಲಿ ಯಾರೂ ಇಲ್ಲ. ಗೃಹಿಣಿ ಒಬ್ಬಳೆ. ಏಕಾಂಗಿಯಾಗಿ ಮಾರ್ಕೆಟಿಗೆ ಹೋದಳು. ವಿಷದ ಬಾಟಲಿ ಖರೀದಿ ಮಾಡಿ ಮನೆಗೆ ಬಂದವಳು' ಶ್ರೀ ಕೃಷ್ಣ ಪರಮಾತ್ಮನ ಫೋಟೋದ ಮುಂದೆ ನಿಂತು, ದೇವ ಶ್ರೀ ಕೃಷ್ಣ ಪರಮಾತ್ಮ ಇಲ್ಲಿ ಕೇಳು. ಇಂದು ನಾನು" ನಿನಗೆ ಕೊನೆಯ ದೀಪ ಹಚ್ಚುವೆನು. ಇನ್ನು ಮುಂದೆ ನೀನು, ನನ್ನ ಮತ್ತು ನನ್ನ ಮಕ್ಕಳ ಮುಖ ನೋಡಲಾರೆ. ಕ್ಷಮಿಸು ಎಂದು ಹೇಳಿ ದೀಪ ಹಚ್ಚಿ ಕೈ ಮುಗಿದು ನಮಸ್ಕಾರ ಮಾಡಿದಳು. ಅಲ್ಲಿಯೆ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕಿದಳು. ಒಂದು ಖಾಲಿ ಪೇಪರ್ ತೆಗೆದು, ಅದರಲ್ಲಿ ಡೆತ್ ನೋಟ್ ಬರೆಯಲು ಸುರುಮಾಡುವ ಹೊತ್ತಿಗೆ ಒಂದು ಆಘಾತಕಾರಿ ಘಟನೆ ನಡೆದು ಹೋಯಿತು. ಅಂದರೆ, ಅವಳ ಯಜಮಾನ ರಸ್ತೆ ಅಪಘಾತದಲ್ಲಿ ಮೃತಪಟ್ಟ  ಎಂಬ ಸುದ್ದಿ ಬಂತು. ಗಾಬರಿಗೊಂಡ ಅವಳು ಎಲ್ಲವನ್ನೂ ಅಲ್ಲೇ ಬಿಟ್ಟು ಆಸ್ಪತ್ರೆ ಕಡೆಗೆ ಹೊರಟು ಹೋದಳು. ಅಲ್ಲಿ ನೋಡಿದರೆ, ಯಜಮಾನ ಸತ್ತು ಹೋಗಿದ್ದ. ನೋಡು ನೋಡುತಿದ್ದಂತೆ ಅವಳಿಗೆ ತಡೆಯಲಾಗದಷ್ಟು ಅಳುಬಂತು. ಭಯ ಸಂಕಟ ಮತ್ತಷ್ಟು ಹೆಚ್ಚಾಯಿತು. ಒಮ್ಮೆ ಜೋರಾಗಿ ಅತ್ತು ಬಿಟ್ಟಳು. Death body ಪಡೆದು  ಮಕ್ಕಳ ಜೊತೆ ಸೇರಿ ಸ್ಮಶಾನ ಭೂಮಿಯಲ್ಲಿ ಗಂಡನ ಅಂತ್ಯ ಸಂಸ್ಕಾರ ಕೂಡ ಮಾಡಿ ಮುಗಿಸಿದಳು. ಇನ್ನು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಕಡೆಗೆ ಹೆಜ್ಜೆ ಹಾಕಿದಳು. ಮುಂದೆ ಹೋಗುತ್ತಿದ್ದಂತೆ ರಸ್ತೆ ಪಕ್ಕದ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇಲ್ಸ್‌ ಗರ್ಲ್ಸ್ ಬೇಕು ಎಂದು ಬೋರ್ಡ್ ಹಾಕಲಾಗಿತ್ತು. ಅದು ಅವಳ ಗಮನಕ್ಕೆ ಬಂತಾದರು, ಅದನ್ನು ಲೆಕ್ಕಿಸದೆ, ಮಕ್ಕಳ ಜೊತೆ ಸೀದಾ ಮನೆ ಸೇರಿಕೊಂಡಳು. ಮಕ್ಕಳು ಹಸಿವುನಿಂದ ಬಳಲುತ್ತಿದ್ದರು. ತಾನೂ ಕೂಡ ಹೊಟ್ಟೆಗೆ ಏನೂ ತಿಂದಿಲ್ಲ. ದುಃಖ ತಡೆಯುತ್ತಿಲ್ಲ. ಬದುಕು ಅಂತ್ಯವಾಗುವ ಸಮಯ ಬಂದೇ ಬಿಟ್ಟಿತು. ಆದರೂ ಮಕ್ಕಳ ಮುಖ ನೋಡಿ ಗಂಜಿ ಬೇಯಿಸಲು ಇಟ್ಟಳು. ಗಂಜಿ ತಯಾರಾಯಿತು. ಇನ್ನು ಗಂಜಿಗೆ ವಿಷ ಬೆರೆಸಬೇಕು. ತಂದಿಟ್ಟ ವಿಷದ ಬಾಟಲಿಯ ಮುಚ್ಚಲ ತೆರೆದಳು . ಗಂಜಿಗೆ ವಿಷ ಬೆರೆಸಬೇಕು ಅನ್ನುವಷ್ಟರಲ್ಲಿ' ತಕ್ಷಣ ಅವಳಿಗೆ ಗೋಚರಿಸಿದ್ದು ಬಟ್ಟೆ ಅಂಗಡಿಯ ಬೋರ್ಡ್. ಆಗ ಯಾಕೋ ಏನೋ " ವಿಷ ಬೆರೆಸುವ ಮನಸ್ಸು ಹಿಂದೆ ಸರಿಯಿತು. ಬಾಟಲಿಗೆ ಮತ್ತೆ ಮುಚ್ಚಲ ಹಾಕಿ, ಯಾರಿಗೂ ಕಾಣದಂತೆ ಮುಚ್ಚಿಟ್ಟಳು. ಮಕ್ಕಳಿಗೆ ಬಿಸಿ ಬಿಸಿ ಗಂಜಿ ಹೊಟ್ಟೆ ತುಂಬ ಬಡಿಸಿ, ನೇರವಾಗಿ ಬಟ್ಟೆ ಅಂಗಡಿಯತ್ತ ಹೊರಟು ಹೋದಳು. ಬಟ್ಟೆ ಅಂಗಡಿಯ ಮಾಲೀಕರ ಬಳಿ ಕೆಲಸ ಕೇಳಿಕೊಂಡಳು. ಮಾಲಿಕರು ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಂಬಳ ಮತ್ತು ಬಟ್ಟೆ ಸೇಲ್ಸ್‌ ಮೇಲೆ 10% ಕಮಿಶನ್ ಕೊಡುವುದಾಗಿ ಹೇಳಿ, ಮರುದಿನ ಬೆಳಿಗ್ಗೆ ಕೆಲಸಕ್ಕೆ ಬರುವಂತೆ ಸೂಚಿಸಿದರು. ಆಗ ಕಣ್ಣೀರಲ್ಲಿ ಮುಳುಗಿ ಹೋಗಿರುವ ಗೃಹಿಣಿ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಳು. ಅಲ್ಲಿಂದ ಮನೆಗೆ ಬಂದವಳು ಗಂಡನ ಫೋಟೋದ ಮುಂದೆ ಕುಳಿತು, ದುಃಖದಿಂದ ತನ್ನ ಮನದಾಳದ ಮಾತುಗಳನ್ನು ಆಡಲು ಶುರು ಮಾಡಿದಳು. 

ನೋಡಿ, ನಾನು ಇನ್ನು ನಮ್ಮ ಅಮಾಯಕ ಮಕ್ಕಳನ್ನು ಕೊಂದು ನಿಮ್ಮ ಬಳಿಗೆ ಬರುವುದಿಲ್ಲ. ನನಗೆ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ ಗರ್ಲ್ ಕೆಲಸ ಸಿಕ್ಕಿದೆ. ನಾಳೆಯಿಂದ ನಾನು ಕೆಲಸಕ್ಕೆ ಹೋಗುವೆ. ಇನ್ನು ನೀವು ನನ್ನ ಮೇಲೆ ಅನುಮಾನ ಪಟ್ಟು ಬೈದು ಕೆಲಸ ಬಿಡಿಸಲು ಸಾಧ್ಯವಿಲ್ಲ. ಯಾಕೆಂದರೆ, ನೀವು ನನ್ನ ಜೊತೆ ಇಲ್ಲ. ನಿಮ್ಮಾಣೆ, ನಾನು ಎಂದೂ ಸಂಶಯಕ್ಕೆ ಎಡೆಮಾಡಿ ಕೊಡುವುದಿಲ್ಲ. ಇಲ್ಲಿ ನೋಡಿ, ನನ್ನ ಹಣೆ ಮೇಲೆ ನೀವು ಇಟ್ಟ ಕುಂಕುಮ ಇನ್ನೂ ಭದ್ರವಾಗಿದೆ. ನೀವು ಪ್ರೀತಿಯಿಂದ ಕಟ್ಟಿದ ಮಾಂಗಲ್ಯ ಸರ ಕೂಡ ಹಾಗೆಯೇ ಉಳಿದಿದೆ ನೋಡಿ. ಇವು ಎರಡೂ ನನ್ನ ಬಳಿ ಇರುವ ವರೆಗೂ.. ಯಾರು ಕೂಡ ನನ್ನನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ. ಈ ಎರಡನ್ನೂ ನಾನು ಜೀವಂತ ಇರುವ ವರೆಗೂ ಉಳಿಸಿಕೊಳ್ಳುವೆ. ನಿಮ್ಮ ನಂಬಿಕೆಗೆ ಎಂದೂ ದ್ರೋಹ ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳುತ್ತಾ ಅಲ್ಲಿಯೇ ನಿದ್ದೆಗೆ ಜಾರಿದಳು.

ಮರುದಿನ ಬೆಳಿಗ್ಗೆ ಬೇಗನೆ ಎದ್ದು ಮಕ್ಕಳಿಗೆ ಕಾಫಿ ತಿಂಡಿ ಕೊಟ್ಟು, ತಾನೂ ಸ್ವಲ್ಪ ತಿಂದು ಹೊರಟವಳು ಬಟ್ಟೆ ಅಂಗಡಿಯ ಕೆಲಸಕ್ಕೆ ಸೇರಿಕೊಂಡಳು. ಬಟ್ಟೆ ವ್ಯಾಪಾರದಲ್ಲಿ ತುಂಬಾ ಜಾಣೆ. ದಿನ ಹೋದಂತೆ ನಂಬರ್ ಒನ್ ಸೇಲ್ಸ್‌ ಗರ್ಲ್ ಪಟ್ಟಕ್ಕೆ ಏರಿದಳು. ದಿನಕ್ಕೆ ಲಕ್ಷ ರೂಪಾಯಿ ಮೌಲ್ಯದ ವರೆಗೂ ಬಟ್ಟೆ ಮಾರಾಟ ಮಾಡಲು ಸುರುಮಾಡಿದಳು. ಪ್ರತಿ ದಿನ ಮೂರರಿಂದ ನಾಲ್ಕು ಸಾವಿರ ರೂಪಾಯಿ ವರೆಗೂ ಕಮಿಶನ್ ಬರಲು ಸುರುವಾಯಿತು. ಆ ಹಣದಿಂದ ಅವಳ ಯಜಮಾನ ಮಾಡಿಟ್ಟ ಸಾಲವನ್ನೆಲ್ಲ ತೀರಿಸಿದಳು. ಮಕ್ಕಳ ವಿದ್ಯಬ್ಯಾಸದ ಖರ್ಚನ್ನೂ ಸ್ವತಃ ತಾವೇ ನೋಡಿಕೊಂಡಳು. ನೆಮ್ಮದಿಯಿಂದ ಸ್ವಂತ ಗಾಡಿ, ಸ್ವಂತ ಮನೆ ಮಾಡಿಕೊಂಡ ಅವಳು " ಒಮ್ಮೆ ತನ್ನ ಹಿಂದಿನ ಬದುಕಿನ ಬಗ್ಗೆ ಹಿಂತಿರುಗಿ ನೋಡಿದಳು.

ಆಗ ಅವಳಿಗೆ ಗೊತ್ತಾಗಿದ್ದು, ರಸ್ತೆ ಅಪಘಾತದಲ್ಲಿ ಸತ್ತು ಹೋಗಿದ್ದು ಬಡತನ. ತನ್ನ ಗಂಡ ಅಲ್ಲ. 


ಈ ಕಥೆಯ ಮೂಲ ಉದ್ದೇಶ "


ಬಡತನವನ್ನು ನಾವೇ ಸೃಷ್ಟಿಸುವುದು ಹೊರತು, ನಮ್ಮ ಪರಿಶ್ರಮ ಅಲ್ಲ. 


ರಚನೆ : ಎನ್. ಎಸ್ ಶೆಟ್ಟಿ


                                                ಪಕ್ವತೆ ಉನ್ನತಿಯ ಲಕ್ಷಣ


ಒಮ್ಮೆ ಒಬ್ಬ ರಾಜ ಬೇಟೆಯಾಡಲು ಹೊರಟ. ಕಾಡಿನಲ್ಲಿ ನುಗ್ಗಿದ. ಉತ್ಸಾಹದಲ್ಲಿ ತುಂಬ ದೂರ ಹೋದದ್ದೇ ತಿಳಿಯಲಿಲ್ಲ. ಸಾಯಂಕಾಲವಾಗುತ್ತ ಬಂದಿತು. ಹಸಿವೆ, ನೀರಡಿಕೆಗಳು ಬಾಧಿಸುತ್ತಿವೆ. ಮರಳಿ ಪಟ್ಟಣಕ್ಕೆ ಹೋಗಬೇಕಾದರೆ ದಾರಿ ತಿಳಿಯುತ್ತಿಲ್ಲ. 


ಅಷ್ಟರಲ್ಲಿ ರಾಜನನ್ನು ಹುಡುಕಿಕೊಂಡು ಸೈನಿಕನೊಬ್ಬ ಬಂದ. ಇಬ್ಬರೂ ಮುಂದೆ ಬರುವಾಗ ಮಂತ್ರಿಯೂ ಸೇರಿಕೊಂಡ. ಮೂವರೂ ಸೇರಿ ತಮ್ಮ ಪಟ್ಟಣದ ಮಾರ್ಗ ಅರಸುತ್ತಿದ್ದರು. ಕೊನೆಗೆ ಕಾಡಿನ ಕೊನೆಗೆ ಬಂದು ಒಂದು ಪುಟ್ಟ ಹಳ್ಳಿ ಪ್ರವೇಶಿಸಿದರು. ದಾರಿಯನ್ನು ಕೇಳಲು ಮೂವರೂ ಮೂರು ದಿಕ್ಕಿಗೆ ನಡೆದರು. 


ರಾಜನಿಗೆ ಒಂದು ದಾರಿ ಸಿಕ್ಕಿತು, ಆದರೆ ದಾರಿಯಲ್ಲಿ ಯಾರೂ ಇರಲಿಲ್ಲ. ಮುಂದೆ ರಸ್ತೆ ಎರಡು ಭಾಗವಾಗುತ್ತಿತ್ತು. ಆ ಸ್ಥಳದಲ್ಲೇ ಮರದ ಕೆಳಗೆ ಒಬ್ಬ ಸನ್ಯಾಸಿ ಕುಳಿತಿದ್ದ. ಅವನನ್ನು ನೋಡಿದರೆ ಪೂರ್ಣ ಅಂಧನಂತೆ ತೋರುತ್ತಿತ್ತು. ರಾಜ ಹೋಗಿ, `ಪೂಜ್ಯ ಸನ್ಯಾಸಿಗಳೇ ವಂದನೆಗಳು. ನಾನು ದಾರಿ ತಪ್ಪಿಸಿಕೊಂಡಿದ್ದೇನೆ.


ನನಗೆ ಪಟ್ಟಣ ಸೇರಬೇಕಾಗಿದೆ. ಮುಂದಿರುವ ಎರಡು ದಾರಿಗಳಲ್ಲಿ ಯಾವುದು ಸರಿ ಎಂದು ಮಾರ್ಗದರ್ಶನ ನೀಡಬಲ್ಲಿರಾ` ಎಂದು ಕೇಳಿದ. ಆಗ ಅಂಧ ಸನ್ಯಾಸಿ, `ದಯವಿಟ್ಟು ಎಡಗಡೆಯ ರಸ್ತೆಯಲ್ಲೇ ಹೋಗಿ ಅದು ನಿಮ್ಮನ್ನು ಪಟ್ಟಣಕ್ಕೇ ತಲುಪಿಸುತ್ತದೆ` ಎಂದ. ಮಂತ್ರಿಯೂ ಅಲ್ಲಲ್ಲಿ ತಿರುಗಾಡಿ ಮತ್ತೆ ಅಲ್ಲಿಗೇ ಬಂದ. ಅವನೂ ಸನ್ಯಾಸಿಯನ್ನು ಅದೇ ಪ್ರಶ್ನೆ ಕೇಳಿ ಅದೇ ಉತ್ತರ ಪಡೆದುಕೊಂಡ. 


ಆದರೆ ಸನ್ಯಾಸಿ ದಾರಿ ತೋರುವಾಗ, `ಇದೇ ತಾನೇ ತಮ್ಮ ರಾಜರು ಹೀಗೆಯೇ ಹೋದರು` ಎಂದ. ಕೆಲ ಸಮಯದ ನಂತರ ಸೈನಿಕ ಅಲ್ಲಿಗೇ ಬಂದ. ಸನ್ಯಾಸಿಯನ್ನು ದಾರಿ ಕೇಳಿದ. ಆಗ ಸನ್ಯಾಸಿ `ಹೌದಪ್ಪ, ಎಡಗಡೆಯ ದಾರಿಯನ್ನೇ ಹಿಡಿದು ಹೋಗು. ಅದೇ ಮಾರ್ಗವಾಗಿ ಇದೀಗ ನಿಮ್ಮ ರಾಜರು ಮತ್ತು ಮಂತ್ರಿಗಳು ಹೋಗಿದ್ದಾರೆ` ಎಂದ.


ನಂತರ ಮೂವರೂ ದಾರಿಯಲ್ಲಿ ಸೇರಿಕೊಂಡಾಗ ಸನ್ಯಾಸಿ ಮಾರ್ಗದರ್ಶನ ಮಾಡಿದ ವಿಷಯ ಚರ್ಚೆಗೆ ಬಂತು. ರಾಜನಿಗೆ ಒಂದು ಸಂದೇಹ ಬಂತು. ತಾನು ಸನ್ಯಾಸಿಯನ್ನು ಕೇವಲ ದಾರಿ ಕೇಳಿದೆನೇ ಹೊರತು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದರೂ ತಾನು ರಾಜ ಎಂದು ಅವನಿಗೆ ಹೇಗೆ ಗೊತ್ತಾಯಿತು. ಹಾಗಾದರೆ ಆತ ಅಂಧತ್ವದ ನಾಟಕ ಮಾಡುತ್ತಿದ್ದಾನೆಯೇ. ಮಂತ್ರಿಗೂ, ಸೈನಿಕನಿಗೂ ಇದೇ ಪ್ರಶ್ನೆ ಬಂದಿತು. 


ಮೂವರೂ ಮರಳಿ ಸನ್ಯಾಸಿಯ ಕಡೆಗೆ ನಡೆದರು. ಆತ ನಿಜವಾಗಿಯೂ ಅಂಧನೇ. ನಮ್ಮ ಪರಿಚಯ ತಮಗೆ ಹೇಗೆ ಆಯಿತು ಎಂದು ಕೇಳಿದಾಗ ಆತ ಹೇಳಿದ, `ತಾವು ದಾರಿ ಕೇಳುವಾಗ ಪೂಜ್ಯ ಸನ್ಯಾಸಿಗಳೇ ಎಂದು ಕರೆದಿರಿ. ತಮ್ಮ ಧ್ವನಿಯಲ್ಲಿದ್ದ ವಿನಯ, ಗಾಂಭೀರ್ಯ ತಾವು ರಾಜರೇ ಇರಬೇಕೆಂದು ತಿಳಿಸಿತು. 


ನಂತರ ಬಂದ ಮಂತ್ರಿಗಳು ಸಾಧುಗಳೇ ಎಂದು ಕರೆದರು. ಆಮೇಲೆ ಬಂದ ಸೈನಿಕ ಏ ಕುರುಡ ಬಾಬಾ ಎಂದು ಕೂಗಿದ. ನೀವು ಮೂವರೂ ಬಳಸಿದ ಭಾಷೆ ಮತ್ತು ಧ್ವನಿಯಿಂದ ನಿಮ್ಮ ಸ್ಥಾನಗಳನ್ನು ಊಹಿಸಿದೆ`. ಯಾವಾಗಲೂ ನಮ್ಮ ನಾಲಿಗೆ ನಮ್ಮ ಮಟ್ಟ ಸಾರುತ್ತದೆ. ಅಂತೆಯೇ ಉನ್ನತಸ್ಥಾನಕ್ಕೇರಿದವರು ತಮ್ಮ ಭಾಷೆಯನ್ನೂ, ಧ್ವನಿಯನ್ನು ಮೃದುಗೊಳಿಸಿಕೊಳ್ಳಬೇಕು. ಮೃದುತ್ವ ಪರಿಪಕ್ವವಾದದ್ದರ ಲಕ್ಷಣ. 


ಮರ ಎತ್ತರವಾದಷ್ಟೂ ಬಾಗುತ್ತದೆ, ಹಣ್ಣು ತುಂಬಿದ ಮರವೂ ಬಾಗುತ್ತದೆ. ಒಗರು, ಹುಳಿಯಾಗಿದ್ದ ಬಿರುಸು ಕಾಯಿ ಮಾಗಿದ ಹಾಗೆ ಮೃದುವಾಗಿ, ಸಿಹಿಯಾಗುತ್ತದೆ. ಈ ಪಕ್ವತೆಯೇ ಉನ್ನತಿಯ ಲಕ್ಷಣ...

ಕಥೆಗಳು

 

                                                            ದಿನಕ್ಕೊಂದು ಕಥೆ

 ಉಳ್ಳಾಲ ಶಾಸಕ ಯುಟಿ ಫರೀದ್ ಅವರ ಮನೆ ಹಾಗೆ.. ದಿನಾ ಬೆಳಗಾದ್ರೆ ಸಾಕು ಒಂದಷ್ಟು ಅಹವಾಲು ಹೊತ್ತ ಜನರಿಂದ ತುಂಬಿರುತ್ತಿತ್ತು. ಹತ್ತು ಗಂಟೆವರೆಗೂ ಜನರೊಂದಿಗೆ ಮಾತನಾಡ್ತಾ ಅವರ ದೂರುಗಳನ್ನು ಸ್ವೀಕರಿಸ್ತಾ ಇದ್ದ ಫರೀದ್ ಆಮೇಲೆ ತಮ್ಮ ಬಾಕಿ ಕಾರ್ಯಕ್ರಮಗಳಿಗೆ ಹೊರಟು ಬಿಡ್ತಾ ಇದ್ರು. ಕಳೆದ ಮೂರು ನಾಲ್ಕು ದಿನದಿಂದ ಅವನ್ಯಾವನೋ ಒಬ್ಬ ಹರಕಲು ಅಂಗಿ ಲುಂಗಿ ಕುರುಚಲು ಕೂದಲಿನ   ಸಣಕಲು ದೇಹದ ಮನುಷ್ಯ ದಿನಾ  ಬೆಳಗಾದ್ರೆ ಜಗಲಿಯಲ್ಲಿ ಬಂದು ಕೂರುತ್ತಿದ್ದ.


 ಮೊಣಕಾಲಿನಿಂದ ಸ್ವಲ್ಪ ಕೆಳಗೆ ಬರುವಂತೆ ಕುಪ್ಪಾಯ ಉಡುತ್ತಿದ್ದ ಅವನನ್ನು ನೋಡಿದ ಕೂಡಲೆ ಅವನೊಬ್ಬ ಪಕ್ಕಾಬ್ಯಾರಿ ಅನ್ನೋದು ತಿಳಿಯುತ್ತಿತ್ತು. ಉಳಿದ ಅಹವಾಲುದಾರರು ಮನೆ ಒಳಗೆ ಬಂದು ಕೂರುತ್ತಿದ್ದರೂ ಈತ ಮಾತ್ರ ಜಗಲಿಯಲ್ಲೇ ಕುಕ್ಕರುಗಾಲು ಮಾಡಿ ಮುಖಕ್ಕೆ ಕೈಕೊಟ್ಟು ಕೂರುತ್ತಿದ್ದ. ಒಳ ಬಂದವರ ಅರ್ಜಿ ವಿಲೇವಾರಿ ಆದ ನಂತರ ಹೊರಟು ಬಿಡುತ್ತಿದ್ದ ಫರೀದ್ ಅವರಿಗೆ ಹೊರಗಡೆ ಬಾಗಿಲು ಕಾಯುತ್ತಿದ್ದ ಈ ಆಸಾಮಿ ಒಂದೆರಡು ದಿನ ಗಮನಕ್ಕೇ ಬಂದಿರಲಿಲ್ಲ.  ಏನೋ... ಮಗಳ ಮದುವೆ, ಮನೆ ಕಟ್ಟೋದಿದೆ.. ರೇಶನ್ನು ಕಾರ್ಡು,.. ಹೆಂಡತಿಗೆ ಆಪರೇಶನ್ನು.. ಹೀಗೆ ಏನೋ ಒಂದು ಗೋಳು ಹೇಳ್ಕೊಂಡು ಬಂದಿರ್ತಾನೆ ಅಂತ ಶಾಸಕರ ಜತೆಗಿದ್ದವರೂ ಈ ಜಗಲಿ ಪಾರ್ಟಿಯನ್ನು ಅಷ್ಟಾಗಿ ಗಮನಿಸಿರಲಿಲ್ಲ.


 ಕಡೆಗೂ ಒಂದು ದಿನ ಆತ ಫರೀದ್ ಕಣ್ಣಿಗೆ ಬಿದ್ದ ನೋಡಿ.. ಬಾರಪ್ಪಾ ಅಲ್ಯಾಕೆ ನೆಲದಲ್ಲಿ ಕೂತಿದ್ಯಾ ಮೇಲೆ ಕೂತ್ಕೋ ಅಂದ್ರು... ಆದರೆ ಅವನಿಗೆ ಮುಜುಗರ ಬಿಡಲಿಲ್ಲ. ಫರೀದ್ ಎಳೆದು ಸೋಫಾದ ಮೇಲೆ ಕೂರಿಸಿದರು. ಏನಪ್ಪಾ ಪ್ರಾಬ್ಲಮ್ಮು  ಅಂದ್ರು... ಅವ ಕೊಟ್ಟ ಉತ್ತರಕ್ಕೆ ವಯೋವೃದ್ಧ ಫರೀದ್ ದಂಗು ಬಡಿದು ಹೋದ್ರು.. ಅಂಗಿಯ ಬಟನನ್ನೂ ಸರಿಯಾಗಿ ಹಾಕಿಕೊಳ್ಳೋ ಅಭ್ಯಾಸ ಇರದ ಆ ಬರಿಗೈ ಫಕೀರ ಹೇಳ್ತಾನೆ ...ನನ್ನ ಊರಿನ ಮಕ್ಕಳಿಗೆ ಕಲಿಯೋದಿಕ್ಕೆ ಶಾಲೆ ಇಲ್ಲ. ನಾನು ಒಂದು  ಶಾಲೆ ಕಟ್ಟಬೇಕು ಅಂತ ಇದ್ದೀನಿ  ಸಾರು....!!  ಶಾಸಕ ಫರೀದ್ ಅವರಿಗೆ ಈ ಮಾತು ಕೇಳಿ ದಿಗ್ಭ್ರಮೆಯಾಯ್ತು.


 ಅವರು ಕೇಳ್ತಾರೆ.  ಏನು ಮಾಡ್ಕೊಂಡಿದ್ದೀಯಾ ನೀನು...? ಅವನು ಹೇಳಿದ ಹಂಪನಕಟ್ಟೆ  ಬಸ್ ಸ್ಟ್ಯಾಂಡಲ್ಲಿ ಬುಟ್ಟಿಯಲ್ಲಿ ಹೊತ್ತು ಕಿತ್ತಾಳೆ ಮಾರ್ತೀನಿ.. ಶಾಲೆ ಕಟ್ಟೋದಿಕ್ಕೆ ಕಿತ್ತಾಳೆ ಮಾರಿ ಉಳಿಸಿದ ಸ್ವಲ್ಪ ಚಿಲ್ಲರೆ ದುಡ್ಡಿದೆ. ಮತ್ತೆ ಯಾರಾದ್ರು ಪುಣ್ಯಾತ್ಮರು ಸಹಾಯ ಮಾಡಿಯಾರು ಅಂತ ಹೇಳಿ ಆ ಮನುಷ್ಯ ಕಣ್ಣಗಲಿಸಿ ತಲೆ ಕೆರೆದುಕೊಂಡ. ಫರೀದ್ ಅವರಿಗೆ ತನ್ನ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಇವನು ಶಾಲೆ ಮಾಡೋದು ಅಂದ್ರೆ ಏನೂಂತ ತಿಳ್ಕೊಂಡಿದ್ದಾನೆ.? ಶಾಸಕರಾದ ನಾವೇ ವರ್ಷಗಟ್ಟಲೆ ಒದ್ದಾಡಿದರೂ ಒಂದು ಶಾಲೆ ಮಂಜೂರು ಮಾಡೋಕಾಗಲ್ಲ. ಬಸ್ಸಿಂದ ಬಸ್ಸಿಗೆ ಜಿಗಿದು ಕಿತ್ತಳೆ ಮಾರಿದಷ್ಟು ಸುಲಭಾನಾ..? ಆದರೆ ಇವನಿಗೆ ಅದರ ಹಿಂದಿರುವ ಕಷ್ಟ ವಿವರಿಸೋದು ಹೇಗೆ..? 


ನೋಡಪ್ಪಾ ನಿನ್ನ ಊರಿನ ಶಾಲೆಗೆ ಪ್ರಸ್ತಾವನೆಯನ್ನ ನಾನು ಮಾಡ್ತೀನಿ ಆದ್ರೆ ಇದರಲ್ಲಿ ತುಂಬಾ ಓಡಾಟ ಇದೆ. ನೀನು  ನೋಡಿದ್ರೆ ಅಂಗೂಟಾ ಛಾಪ್  ಯಾವ ಫೈಲು, ಯಾವ ಇಲಾಖೆ, ಯಾರು ಅಧಿಕಾರಿ .ಹುಡುಕ ಬೇಕು.. ಕೊಡಬೇಕು.. ಇದೆಲ್ಲಾ ನಿನ್ನಿಂದ ಆದೀತೋ..? ಅಂತ ಕೇಳಿ ಅವನ ಮುಖ ನೋಡಿದರು.

 ಸಾರು... ನೀವು ಮೇಲೆ ಬರೆದು ಹಾಕಿ ಸಾಕು. ಆಮೇಲೆ ನಾನು ನೋಡಿ ಕೊಳ್ತೇನೆ ನಾನು ಮಂಗಳೂರಿನಲ್ಲೇ ಇರೋದು. ಎಲ್ಲಾ ಕೆಲಸ ನಾನೇ ಮಾಡಿಸ್ತೇನೆ ಅಂದ. 


 ಅವನ ಸುಕ್ಕುಗಟ್ಟಿದ ಕಪ್ಪು ಮುಖದಲ್ಲಿ ಚಿಮ್ಮಿದ  ಉತ್ಸಾಹದ ಹಿರಿನಗೆ ಕಂಡು ಫರೀದ್ ಅವರಿಗೂ ತಡೆಯಲಾಗಲಿಲ್ಲ. ಕೂಡಲೆ ಪ್ರಾಥಮಿಕ ಶಾಲೆ ಮಂಜೂರು ಮಾಡುವಂತೆ ಇಲಾಖೆಗೆ ಬರೆದು ಹಾಕಿದರು. ಅಲ್ಲೇ ಇದ್ದ ಒಂದಿಬ್ಬರು ಪುಸುಕ್ಕನೆ ನಕ್ಕರು. ಅದು ಪಂಜಿ ಮುಡಿಯ ಹಾಜಬ್ಬ ಅಲ್ವಾ..? ಅವನಿಗೆ ಎಂಥ ಶಾಲೆಯ ಮರ್ಲ್ ಸುರುವಾಗಿದ್ದು ಮಾರ್ರೆ.. ? 

ಹೌದು ಹಾಜಬ್ಬನಿಗೆ ಶಾಲೆ ಕಟ್ಟುವ ಹುಚ್ಚು ತಲೆಗೆ ಅಡರಿತ್ತು.


ಶಾಸಕ  ಫರೀದ್ ಅವರಿಂದ ಭರವಸೆ ಸಿಕ್ಕಿದ್ದೇ ತಡ ಆರಂಭವಾಯ್ತು ನೋಡಿ ಅಕ್ಷರದ ಹುಚ್ಚನ ಕಚೇರಿ ಅಲೆದಾಟದ ರಂಪು. 

ಈ ಮನುಷ್ಯನನ್ನು ಸರಿಯಾಗಿ ನೋಡಿದರೆ ಈತ ಎದುರಿಗೆ ಬಾಗದೆ ಹಿಂದಕ್ಕೆ ವಾಲುತ್ತಾರೆ. ಇದು ಸರಕಾರಿ ಅಧಿಕಾರಿಗಳು ಇವರನ್ನು ಆರು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ ಬೆನ್ನು ಮೂಳೆಯ  ಬೆಂಡೆತ್ತಿದ ನಿಶಾನಿ.  ಮದ್ಯಾಹ್ನದವರೆಗೆ ಕಿತ್ತಾಳೆ ಮಾರಿ ಮದ್ಯಾಹ್ನ ಒಂದು ಪರೋಟ ತಿಂದು ದುಡಿದ ದುಡ್ಡಿನಲ್ಲಿ ಶಾಲೆಗಾಗಿ ಹೋರಾಟ...


 ಅಲೆಯದ ಕಚೇರಿ ಇಲ್ಲ.. ಕಾಣದ ಅಧಿಕಾರಿಗಳಿಲ್ಲ.. ಹಿಡಿಯದೆ ಉಳಿದ ಪುಡಾರಿಗಳ ಕೈಕಾಲಿಲ್ಲ. ಕಡತಗಳ ನಡುವೆ ಅಪ್ಪಚ್ಚಿಯಾದ ಜಿರಳೆಯಂತಾಗಿದ್ದ ಹಾಜಬ್ಬರನ್ನು  ಅಧಿಕಾರಿಗಳು ಹಾವು ಏಣಿ ಆಟ ಆಡಿಸಿದರು. ಕೆಲವು ಅಧಿಕಾರಿಗಳಿಗೆ ಈ ಕಿತ್ತಳೆ ವ್ಯಾಪಾರಿಯ ಶಿಕ್ಷಣದ ಬಗ್ಗೆ ಇರುವ ಒಲವು ಕಂಡು ಅಚ್ಚರಿಯಾಗಿ ತಮ್ಮಿಂದ ಆದ ಸಹಾಯವನ್ನು ಮಾಡಿದರು. ಕೊನೆಗೂ ೧೯೯೯ರಲ್ಲಿ ಹಾಜಬ್ಬನ ಬರಿಗಾಲ ಸವೆತಕ್ಕೆ ಅಕ್ಷರಲಕ್ಷ್ಮಿಯ ಭಾಗ್ಯದ ಬಾಗಿಲು ತೆರೆದುಕೊಂಡಿತು. ಅಲ್ಲಿನ ಮದರಸಾವೊಂದರಲ್ಲೇ ತಾತ್ಕಾಲಿಕ ಪ್ರಾಥಮಿಕ ಶಾಲೆ ಆರಂಭವಾಯಿತು. 


ಆರು ವ‍ರ್ಷದ ಭಗೀರಥ ಶ್ರಮ ಕೊನೆಗೂ ಫಲನೀಡಿತು. ಕಿತ್ತಳೆ ಬುಟ್ಟಿಯಿಂದ ಅಕ್ಷರ ಕ್ರಾಂತಿ ಹೊಮ್ಮಿತು. ಮಳೆಗಾಲಕ್ಕೆ ಸೋರುವ ತನ್ನ ಮುರುಕಲು ಮನೆಯಲ್ಲಿ ಅರೆ ಹೊಟ್ಟೆಯಲ್ಲಿ ಮಲಗಿದ ಮಕ್ಕಳು ಮತ್ತು ಉಬ್ಬಸ ಪೀಡಿತ ಹೆಂಡತಿಯ ಕೆಮ್ಮಿನ ನಡುವೆಯೂ ಹಾಜಬ್ಬನಿಗೆ ಶಾಲೆಗೊಂದು ಸ್ವಂತ ಕಟ್ಟಡ ಇಲ್ಲವಲ್ಲ ಅನ್ನುವ ಚಟಪಡಿಕೆ ಕಾಡತೊಡಗಿತು. ಅವರಿವರ ಕೈ ಕಾಲು ಹಿಡಿದು ಅಲ್ಲೇ ಇದ್ದ ಸರಕಾರಿ ಭೂಮಿಯಲ್ಲಿ ಸಣ್ಣ ಕಟ್ಟಡವೊಂದನ್ನು ಹಾಜಬ್ಬ ಕಟ್ಟಿಸಿದರು. ಈಗ ಆ ಶಾಲೆಗೆ ಹಾಜಬ್ಬ ಅವರ ಹೆಸರು ಇಡ ಬಾರದು ಅಂತ ಅಪಸ್ವರ ಎತ್ತುತ್ತಿರುವವುಗಳೆಲ್ಲ ಆಗ ಚಡ್ಡಿ ಇಲ್ಲದೆ ಸಿಂಬಳ ಸುರಿಸಿಕೊಂಡು ಓಡಾಡುತ್ತಿದ್ದವು. 


ಶಾಲೆಗೆ ಜಾಗ, ಕಟ್ಟಡ, ಬಾವಿ, ವಿದ್ಯುತ್,ಪಂಪು, ಹೈಸ್ಕೂಲು, ಹೀಗೆ ಒಂದೊಂದರ ಹಿಂದೆಯೂ ಈ ಹಾಜಬ್ಬನ ಬೆವರಿನ ಶ್ರಮವಿದೆ. ಹರೇಕಳದ ಪಡ್ಪುವಿನಲ್ಲಿ ಒಬ್ಬ ಬರಿಗಾಲ ಪಕೀರ ಸರಕಾರಿ ಶಾಲೆ ತರಲು ಈ ಪಾಟಿ ಬಡಿದಾಡುತ್ತಿದ್ದರೂ ಹೊರಜಗತ್ತಿಗೆ ಮಾತ್ರ ಇದರ ಬಗ್ಗೆ ಎಳ್ಳಷ್ಟೂ ಅರಿವಿರಲಿಲ್ಲ. ಈ ಅಕ್ಷರಸಂತನನ್ನು ಮೊತ್ತಮೊದಲು ಬೆಳಕಿಗೆ ತಂದವರು ಹೊಸದಿಗಂತ ಪತ್ರಿಕೆಯ ಗುರುವಪ್ಪ ಬಾಳೆ ಪುಣಿಯವರು. ಅವರ ವರದಿಯ ಬಳಿಕ ಹಲವಾರು ಜನರು ಹರೇಕಳ ಹಾಜಬ್ಬರ ಬಗ್ಗೆ ಬರೆದರು.


 ಕಿತ್ತಳೆ ಮಾರುವ ಹಾಜಬ್ಬ ಅದ್ಯಾವ ಮಟ್ಟಕ್ಕೆ ಬೆಳೆದರು ಅಂದ್ರೆ ಅವರ ಜೀವನವೇ ಮೂರು ಯೂನಿವರ್ಸಿಟಿಯ ವಿಧ್ಯಾರ್ಥಿಗಳಿಗೆ ಪಾಠವಾಗಿಬಿಟ್ಟಿತು. ರಾಜ್ಯದ ಹೆಚ್ಚಿನ ಎಲ್ಲಾ ಪ್ರತಿಷ್ಟಿತ ಪ್ರಶಸ್ತಿಗಳು ಹಾಜಬ್ಬ ಅವರಿಗೆ ಸಂದಿತು. ಹಾಜಬ್ಬ ಅವರ ಪರಿಶ್ರಮಕ್ಕೆ ಮೆಚ್ಚಿ ಲಕ್ಷಾಂತರ ರೂಪಾಯಿ ಹಣ ನ್ಯೂ ಪಟ್ಪುವಿನ ಈ  ಶಾಲೆಗೆ ಹರಿದು ಬಂತು. ತನಗೆ ದಕ್ಕಿದ ಎಲ್ಲಾ ಹಣವನ್ನು ಮನೆ,ಮಕ್ಕಳಿಗೆ ನೀಡದೆ ಹಾಜಬ್ಬ ಈ ಶಾಲೆಗೆ ಧಾರೆ ಎರೆದರು. ಪ್ರತಿಷ್ಟಿತ ಅಂತರಾಷ್ಟ್ರೀಯ ಸುದ್ದಿವಾಹಿನಿಯೊಂದು ಒಟ್ಟು ೨೦ ರಿಯಲ್ ಹಿರೋಸ್ ಗಳನ್ನು ಘೋಷಿಸಿ ಪ್ರಶಸ್ತಿ ನೀಡಿದೆ. ಆ ಪ್ರಶಸ್ತಿಗಳಲ್ಲಿ ಒಂದು ಹಾಜಬ್ಬರ ಮನೆಯಲ್ಲಿದೆ.


ಒಮ್ಮೆ ದುಬಾಯಿಯಲ್ಲಿ ಒಂದು ಸಂಘಟನೆಯವರು ಹಾಜಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಂತೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹಾಜಬ್ಬ  ತನ್ನ ಅದೇ ಹಳೆ ಅಂಗಿ ಲುಂಗಿ ತೊಟ್ಟು ಕೊಂಡು ಒಂದು ಪ್ಲಾಸ್ಟಿಕ್ ತೊಟ್ಟೆಯನ್ನು ಮಡಚಿ ಬಗಲಲ್ಲಿ ಇಟ್ಟುಕೊಂಡು ಇಮಿಗ್ರೇಶನ್ ಹತ್ತಿರ ನಿಂತುಕೊಂಡಿದ್ದರಂತೆ. ಆ ಅಧಿಕಾರಿಗೆ ಈ ಆಕೃತಿಯನ್ನು ನೋಡಿ ಶಾಕ್ ಆಯ್ತು. ಇವನ್ಯಾರೋ ನೈಜೀರಿಯಾದ ನಿರಾಶ್ರಿತ ಇದ್ದಂಗಿದ್ದಾನಲ್ಲಪ್ಪಾ..? ಅಂತ ಅನುಮಾನ ಬಂದು ಮುಂದೆ ಹೋಗಲು ಬಿಡದೆ ಪಕ್ಕದಲ್ಲಿ ನಿಲ್ಲಿಸಿ ಬಿಟ್ಟ. ಎಲ್ಲರ ಚೆಕಪ್ ಮುಗಿಯೋವರೆಗೆ ಇವರನ್ನ ಬಿಡಲೇ ಇಲ್ಲ.


 ತಾನು ಯಾರು ..ಏನು.. ಎಲ್ಲಿಗೆ ಹೋಗುತ್ತಿದ್ದೇನೆ ಅನ್ನೋದನ್ನ ಹೇಳೋದಿಕ್ಕೆ ಇವರಿಗೆ ಭಾಷೆ ಬೇರೆ ಬರೋದಿಲ್ಲ. ಒಂದೆರಡು ಗಂಟೆಯ ಬಳಿಕ ಹಾಜಬ್ಬರಿಗೆ ಅದು ಹೇಗೋ ತಲೆ ಕೆಲಸ ಮಾಡಿತು. ತನ್ನ ಹರಕಲು ತೊಟ್ಟೆಯಿಂದ ಒಂದಷ್ಟು ಪೇಪರ್ ಕಟಿಂಗ್ಸನ್ನು ತೆಗೆದು ಆ ಅಧಿಕಾರಿಯ ಎದುರು ಹಿಡಿದರು. ಅಂತರಾಷ್ಟ್ರೀಯ ಮಟ್ಟದ ಆಂಗ್ಲ ಪತ್ರಿಕೆಗಳು ಹಾಜಬ್ಬ ಅವರ ಬಗ್ಗೆ ಚಿತ್ರ ಸಹಿತವಾಗಿ ಮಾಡಿದ್ದ ವರದಿಗಳು ಅಲ್ಲಿದ್ದವು. ಆ ಅಧಿಕಾರಿಗೆ ತನ್ನ ಎದುರಿಗೆ ನಿಂತಿರುವವನು ಎಂಥಾ ದೊಡ್ಡ ಸಾಧಕ ಅನ್ನೋದು ತಿಳಿದು ತನ್ನ ತಪ್ಪಿನ ಅರಿವಾಗಿ ಹಾಜಬ್ಬರ ಬಳಿ ಕ್ಷಮೆ ಕೇಳಿ ಅವರಿಗೆ ತಾನೇ ಮಾರ್ಗದರ್ಶನ ಮಾಡಿ ವಿಮಾನ ನಿಲ್ದಾಣದಿಂದ ಹೊರ ಗೇಟಿನ ತನಕ ಕಳುಹಿಸಿ ಕೊಟ್ಟನಂತೆ..!!


 ಈ ರೀತಿಯ ನೂರಾರು ಕತೆಗಳು ಹಾಜಬ್ಬರ ಬಗಲಿನಲ್ಲಿರುವ ತೊಟ್ಟೆಯಲ್ಲಿ ಬೆಚ್ಚಗೆ ಕುಳಿತಿವೆ.

 ಗುರುವಪ್ಪ ಬಾಳೆಪುಣಿಯವರು ಹೇಳುವಂತೆ ಇಷ್ಟೆಲ್ಲಾ ಪ್ರಶಸ್ತಿಗಳು ಬಂದರೂ ಸಾವಿರಾರು ವೇದಿಕೆಗಳನ್ನು ಹತ್ತಿ ಇಳಿದರೂ ಹಾಜಬ್ಬ ಇಂದಿಗೂ ಬದಲಾಗಿಲ್ಲ. ಎಂಥೆಂಥಾ ಅಂತರಾಷ್ಟ್ರೀಯ ಪ್ರತಿಷ್ಟಿತ ವೇದಿಕೆಗಳನ್ನೂ ಹಾಜಬ್ಬ ಅವರು ಇದೇ ವೇಷದಲ್ಲಿ ಹತ್ತಿ ಇಳಿದಿದ್ದಾರೆ. ಈವತ್ತಿಗೂ ಅವರ ಅಂಗಿಯ ಮೇಲಿನ ಎರಡು ಬಟನ್ ಗಳನ್ನು ಹಾಕಿಸೋದು ಯಾರಿಂದಲೂ ಸಾಧ್ಯವಾಗಿಲ್ಲ. 


ಪುಟ್ಟ ಮಕ್ಕಳಿಗಿರುವ ಮೊಂಡು ಹಠ ಈ ಮನುಷ್ಯನಿಗಿದೆ. ಇಂದಿಗೂ ಅದೇ ಭಾಷೆ, ಅದೇ ಸಣ್ಣ ಮಗುವಿನಂತ ಮುಗ್ಧತೆ, ಹಠಮಾರಿತನ, ಯಾರನ್ನೂ ನೋಯಿಸದ ನೋಯಿಸಲಾರದ ಸೌಮ್ಯ ವ್ಯಕ್ತಿತ್ವ. ಅದೇ ಹವಾಯಿ ಚಪ್ಪಲು. ಅದೇ ಕಿತ್ತಾಳೆಯ ಬುಟ್ಟಿ... ಹಾಜಬ್ಬ ಯಾವತ್ತಿಗೂ ಬದಲಾಗೋದಿಲ್ಲ. ಹೆಣ್ಣು ಮಕ್ಕಳು ಮದುವೆಯ ಪ್ರಾಯಕ್ಕೆ ಬಂದಿದ್ದಾರೆ. ಮಗ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಾನೆ. ಮನೆ ಬಹಳ ಕಷ್ಟದಲ್ಲಿ ನಡೀತಿದೆ. ಆದರೆ ಹಾಜಬ್ಬನಿಗೆ ಮಾತ್ರ ಹೈಸ್ಕೂಲ್ ಪಕ್ಕದಲ್ಲೇ ಕಾಲೇಜೂ ಆಗಬೇಕು  ಎನ್ನುವ ಹುಚ್ಚು..... 


 ಹುಚ್ಚು ನಮ್ಮಲ್ಲೂ ಇದೆ. ನಮ್ಮದು ದಿನಕ್ಕೊಂದು ಹುಚ್ಚು. ನಮ್ಮ ಹುಚ್ಚು ದಿನಾ ಹುಟ್ಟುತ್ತದೆ ದಿನಾ ಸಾಯುತ್ತದೆ. ಅರ್ಥವಿಲ್ಲದ ಹುಚ್ಚುಗಳ ಹುಟ್ಟು ಸಾವಿನ ಸಂತೆಯೇ ನಮ್ಮ ಜೀವನ.  ಆದರೆ ಈ ಸಾಧಕರ ಬದುಕು ಹಾಗಲ್ಲ ಅವರು ಸ್ಥಿತಪ್ರಜ್ಞರು ಅಂದುಕೊಂಡದ್ದನ್ನು ಸಾಧಿಸದೆ ಅವರು ವಿರಮಿಸೋದಿಲ್ಲ. ಜಗತ್ತು ಅವರಿಗೆ ಏನೇ ಅನ್ನಲಿ. ಅದನ್ನು ಕಟ್ಟಿಕೊಂಡು ಅವರಿಗೆ ಆಗಬೇಕಿರುವುದು ಏನೂ ಇಲ್ಲ. ಹಾಜಬ್ಬರಿಗೆ ಒಂದೇ ಹುಚ್ಚು ಅಡರಿತ್ತು. ಅದನ್ನೇ ಬೆನ್ನು ಬಿದ್ದು ಸಾಧಿಸಿದರು.  


ಈ ಮಹಾನ್ ವ್ಯಕ್ತಿಗೆ ಭಾರತ ಸರ್ಕಾರ 2020ರಲ್ಲಿ  ಪ್ರತಿಷ್ಟಿತ  ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.


ಕಥೆಗಳು

                                                              ದಿನಕ್ಕೊಂದು ಕಥೆ

ಬಡತನ ಸತ್ತು ಹೋದಾಗ


ಒಂದು ಬಡ ಸಂಸಾರವಿತ್ತು. ಆ ಸಂಸಾರದ ಯಜಮಾನ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾದರೆ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮುದ್ದು ಮಕ್ಕಳು. ಆದರೆ ಯಜಮಾನನಿಗೆ ಮಾತ್ರ ಕುಡಿತದ ಚಟ. ಸರಿಯಾಗಿ ಕೆಲಸಕ್ಕೆ ಹೋಗದೆ, ದಿನಾ ಕುಡಿದು ಮನೆಗೆ ಬಂದು ಲೇ ಲೇ ಹಾಕುತಿದ್ದ. ಆತನ ತಿಂಗಳ ಸಂಬಳ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಮನೆ ಗೃಹಿಣಿ ಕೆಲಸಕ್ಕೆ ಸೇರಿದಾಗ, ಅದಕ್ಕೂ ಅನುಮಾನ ಪಟ್ಟು ಬೈದು ನಿಂದನೆ ಮಾಡಿ ಕೆಲಸ ಬಿಡಿಸಿದ. ಮನೆ ಬಾಡಿಗೆ, ಮಕ್ಕಳ ವಿದ್ಯಬ್ಯಾಸ, ಮನೆ ಖರ್ಚು ಎಂಬಂತೆ, ಯಾವುದನ್ನೂ ನಿಭಾಯಿಸಲು ಸಾಧ್ಯವಾಗದೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರ ಪರಿಣಾಮ, ಅತೀವವಾದ ಬಡತನ ಅವನ ಸಂಸಾರವನ್ನು ಕಾಡುತ್ತಿತ್ತು. ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಅಂದರೆ, ಆತನ ಈ ಕುಡಿತದ ಚಟದಿಂದಾಗಿ ಬಡತನ ಅವರ ಬೆನ್ನು ಹತ್ತಿ ಕಾಡುತ್ತಿತ್ತು.

ಒಂದು ಕಡೆ ಬಾಡಿಗೆಗಾಗಿ ಮನೆ ಮಾಲೀಕರ ಕಿರುಕುಳವಾದರೆ ಇನ್ನೊಂದು ಕಡೆ ಸಾಲಗಾರರ ಕಿರುಕುಳ. ಈ ಎಲ್ಲಾ ಕಷ್ಟಗಳಿಂದ ಪಾರಾಗುದು ತುಂಬಾ ಕಷ್ಟ ಎಂದು ಭಾವಿಸಿದ ಆತನ ಹೆಂಡತಿ ' ಮರಿಯಾದೆಗೆ ಅಂಜಿದಳು. ಬದುಕಲು ಇಷ್ಟವಿಲ್ಲದೆ, ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಳು .

ಮರುದಿನ ಅವಳ ಯಜಮಾನ ಕೆಲಸಕ್ಕೆಂದು ಹೊರಟು ಹೋದ. ಮಕ್ಕಳೂ ಶಾಲೆಗೆ ಹೊರಟು ಹೋದರು. ಆ ವೇಳೆಗೆ ಮನೆಯಲ್ಲಿ ಯಾರೂ ಇಲ್ಲ. ಗೃಹಿಣಿ ಒಬ್ಬಳೆ. ಏಕಾಂಗಿಯಾಗಿ ಮಾರ್ಕೆಟಿಗೆ ಹೋದಳು. ವಿಷದ ಬಾಟಲಿ ಖರೀದಿ ಮಾಡಿ ಮನೆಗೆ ಬಂದವಳು' ಶ್ರೀ ಕೃಷ್ಣ ಪರಮಾತ್ಮನ ಫೋಟೋದ ಮುಂದೆ ನಿಂತು, ದೇವ ಶ್ರೀ ಕೃಷ್ಣ ಪರಮಾತ್ಮ ಇಲ್ಲಿ ಕೇಳು. ಇಂದು ನಾನು" ನಿನಗೆ ಕೊನೆಯ ದೀಪ ಹಚ್ಚುವೆನು. ಇನ್ನು ಮುಂದೆ ನೀನು, ನನ್ನ ಮತ್ತು ನನ್ನ ಮಕ್ಕಳ ಮುಖ ನೋಡಲಾರೆ. ಕ್ಷಮಿಸು ಎಂದು ಹೇಳಿ ದೀಪ ಹಚ್ಚಿ ಕೈ ಮುಗಿದು ನಮಸ್ಕಾರ ಮಾಡಿದಳು. ಅಲ್ಲಿಯೆ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕಿದಳು. ಒಂದು ಖಾಲಿ ಪೇಪರ್ ತೆಗೆದು, ಅದರಲ್ಲಿ ಡೆತ್ ನೋಟ್ ಬರೆಯಲು ಸುರುಮಾಡುವ ಹೊತ್ತಿಗೆ ಒಂದು ಆಘಾತಕಾರಿ ಘಟನೆ ನಡೆದು ಹೋಯಿತು. ಅಂದರೆ, ಅವಳ ಯಜಮಾನ ರಸ್ತೆ ಅಪಘಾತದಲ್ಲಿ ಮೃತಪಟ್ಟ  ಎಂಬ ಸುದ್ದಿ ಬಂತು. ಗಾಬರಿಗೊಂಡ ಅವಳು ಎಲ್ಲವನ್ನೂ ಅಲ್ಲೇ ಬಿಟ್ಟು ಆಸ್ಪತ್ರೆ ಕಡೆಗೆ ಹೊರಟು ಹೋದಳು. ಅಲ್ಲಿ ನೋಡಿದರೆ, ಯಜಮಾನ ಸತ್ತು ಹೋಗಿದ್ದ. ನೋಡು ನೋಡುತಿದ್ದಂತೆ ಅವಳಿಗೆ ತಡೆಯಲಾಗದಷ್ಟು ಅಳುಬಂತು. ಭಯ ಸಂಕಟ ಮತ್ತಷ್ಟು ಹೆಚ್ಚಾಯಿತು. ಒಮ್ಮೆ ಜೋರಾಗಿ ಅತ್ತು ಬಿಟ್ಟಳು. Death body ಪಡೆದು  ಮಕ್ಕಳ ಜೊತೆ ಸೇರಿ ಸ್ಮಶಾನ ಭೂಮಿಯಲ್ಲಿ ಗಂಡನ ಅಂತ್ಯ ಸಂಸ್ಕಾರ ಕೂಡ ಮಾಡಿ ಮುಗಿಸಿದಳು. ಇನ್ನು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಕಡೆಗೆ ಹೆಜ್ಜೆ ಹಾಕಿದಳು. ಮುಂದೆ ಹೋಗುತ್ತಿದ್ದಂತೆ ರಸ್ತೆ ಪಕ್ಕದ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇಲ್ಸ್‌ ಗರ್ಲ್ಸ್ ಬೇಕು ಎಂದು ಬೋರ್ಡ್ ಹಾಕಲಾಗಿತ್ತು. ಅದು ಅವಳ ಗಮನಕ್ಕೆ ಬಂತಾದರು, ಅದನ್ನು ಲೆಕ್ಕಿಸದೆ, ಮಕ್ಕಳ ಜೊತೆ ಸೀದಾ ಮನೆ ಸೇರಿಕೊಂಡಳು. ಮಕ್ಕಳು ಹಸಿವುನಿಂದ ಬಳಲುತ್ತಿದ್ದರು. ತಾನೂ ಕೂಡ ಹೊಟ್ಟೆಗೆ ಏನೂ ತಿಂದಿಲ್ಲ. ದುಃಖ ತಡೆಯುತ್ತಿಲ್ಲ. ಬದುಕು ಅಂತ್ಯವಾಗುವ ಸಮಯ ಬಂದೇ ಬಿಟ್ಟಿತು. ಆದರೂ ಮಕ್ಕಳ ಮುಖ ನೋಡಿ ಗಂಜಿ ಬೇಯಿಸಲು ಇಟ್ಟಳು. ಗಂಜಿ ತಯಾರಾಯಿತು. ಇನ್ನು ಗಂಜಿಗೆ ವಿಷ ಬೆರೆಸಬೇಕು. ತಂದಿಟ್ಟ ವಿಷದ ಬಾಟಲಿಯ ಮುಚ್ಚಲ ತೆರೆದಳು . ಗಂಜಿಗೆ ವಿಷ ಬೆರೆಸಬೇಕು ಅನ್ನುವಷ್ಟರಲ್ಲಿ' ತಕ್ಷಣ ಅವಳಿಗೆ ಗೋಚರಿಸಿದ್ದು ಬಟ್ಟೆ ಅಂಗಡಿಯ ಬೋರ್ಡ್. ಆಗ ಯಾಕೋ ಏನೋ " ವಿಷ ಬೆರೆಸುವ ಮನಸ್ಸು ಹಿಂದೆ ಸರಿಯಿತು. ಬಾಟಲಿಗೆ ಮತ್ತೆ ಮುಚ್ಚಲ ಹಾಕಿ, ಯಾರಿಗೂ ಕಾಣದಂತೆ ಮುಚ್ಚಿಟ್ಟಳು. ಮಕ್ಕಳಿಗೆ ಬಿಸಿ ಬಿಸಿ ಗಂಜಿ ಹೊಟ್ಟೆ ತುಂಬ ಬಡಿಸಿ, ನೇರವಾಗಿ ಬಟ್ಟೆ ಅಂಗಡಿಯತ್ತ ಹೊರಟು ಹೋದಳು. ಬಟ್ಟೆ ಅಂಗಡಿಯ ಮಾಲೀಕರ ಬಳಿ ಕೆಲಸ ಕೇಳಿಕೊಂಡಳು. ಮಾಲಿಕರು ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಂಬಳ ಮತ್ತು ಬಟ್ಟೆ ಸೇಲ್ಸ್‌ ಮೇಲೆ 10% ಕಮಿಶನ್ ಕೊಡುವುದಾಗಿ ಹೇಳಿ, ಮರುದಿನ ಬೆಳಿಗ್ಗೆ ಕೆಲಸಕ್ಕೆ ಬರುವಂತೆ ಸೂಚಿಸಿದರು. ಆಗ ಕಣ್ಣೀರಲ್ಲಿ ಮುಳುಗಿ ಹೋಗಿರುವ ಗೃಹಿಣಿ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಳು. ಅಲ್ಲಿಂದ ಮನೆಗೆ ಬಂದವಳು ಗಂಡನ ಫೋಟೋದ ಮುಂದೆ ಕುಳಿತು, ದುಃಖದಿಂದ ತನ್ನ ಮನದಾಳದ ಮಾತುಗಳನ್ನು ಆಡಲು ಶುರು ಮಾಡಿದಳು. 

ನೋಡಿ, ನಾನು ಇನ್ನು ನಮ್ಮ ಅಮಾಯಕ ಮಕ್ಕಳನ್ನು ಕೊಂದು ನಿಮ್ಮ ಬಳಿಗೆ ಬರುವುದಿಲ್ಲ. ನನಗೆ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ ಗರ್ಲ್ ಕೆಲಸ ಸಿಕ್ಕಿದೆ. ನಾಳೆಯಿಂದ ನಾನು ಕೆಲಸಕ್ಕೆ ಹೋಗುವೆ. ಇನ್ನು ನೀವು ನನ್ನ ಮೇಲೆ ಅನುಮಾನ ಪಟ್ಟು ಬೈದು ಕೆಲಸ ಬಿಡಿಸಲು ಸಾಧ್ಯವಿಲ್ಲ. ಯಾಕೆಂದರೆ, ನೀವು ನನ್ನ ಜೊತೆ ಇಲ್ಲ. ನಿಮ್ಮಾಣೆ, ನಾನು ಎಂದೂ ಸಂಶಯಕ್ಕೆ ಎಡೆಮಾಡಿ ಕೊಡುವುದಿಲ್ಲ. ಇಲ್ಲಿ ನೋಡಿ, ನನ್ನ ಹಣೆ ಮೇಲೆ ನೀವು ಇಟ್ಟ ಕುಂಕುಮ ಇನ್ನೂ ಭದ್ರವಾಗಿದೆ. ನೀವು ಪ್ರೀತಿಯಿಂದ ಕಟ್ಟಿದ ಮಾಂಗಲ್ಯ ಸರ ಕೂಡ ಹಾಗೆಯೇ ಉಳಿದಿದೆ ನೋಡಿ. ಇವು ಎರಡೂ ನನ್ನ ಬಳಿ ಇರುವ ವರೆಗೂ.. ಯಾರು ಕೂಡ ನನ್ನನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ. ಈ ಎರಡನ್ನೂ ನಾನು ಜೀವಂತ ಇರುವ ವರೆಗೂ ಉಳಿಸಿಕೊಳ್ಳುವೆ. ನಿಮ್ಮ ನಂಬಿಕೆಗೆ ಎಂದೂ ದ್ರೋಹ ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳುತ್ತಾ ಅಲ್ಲಿಯೇ ನಿದ್ದೆಗೆ ಜಾರಿದಳು.

ಮರುದಿನ ಬೆಳಿಗ್ಗೆ ಬೇಗನೆ ಎದ್ದು ಮಕ್ಕಳಿಗೆ ಕಾಫಿ ತಿಂಡಿ ಕೊಟ್ಟು, ತಾನೂ ಸ್ವಲ್ಪ ತಿಂದು ಹೊರಟವಳು ಬಟ್ಟೆ ಅಂಗಡಿಯ ಕೆಲಸಕ್ಕೆ ಸೇರಿಕೊಂಡಳು. ಬಟ್ಟೆ ವ್ಯಾಪಾರದಲ್ಲಿ ತುಂಬಾ ಜಾಣೆ. ದಿನ ಹೋದಂತೆ ನಂಬರ್ ಒನ್ ಸೇಲ್ಸ್‌ ಗರ್ಲ್ ಪಟ್ಟಕ್ಕೆ ಏರಿದಳು. ದಿನಕ್ಕೆ ಲಕ್ಷ ರೂಪಾಯಿ ಮೌಲ್ಯದ ವರೆಗೂ ಬಟ್ಟೆ ಮಾರಾಟ ಮಾಡಲು ಸುರುಮಾಡಿದಳು. ಪ್ರತಿ ದಿನ ಮೂರರಿಂದ ನಾಲ್ಕು ಸಾವಿರ ರೂಪಾಯಿ ವರೆಗೂ ಕಮಿಶನ್ ಬರಲು ಸುರುವಾಯಿತು. ಆ ಹಣದಿಂದ ಅವಳ ಯಜಮಾನ ಮಾಡಿಟ್ಟ ಸಾಲವನ್ನೆಲ್ಲ ತೀರಿಸಿದಳು. ಮಕ್ಕಳ ವಿದ್ಯಬ್ಯಾಸದ ಖರ್ಚನ್ನೂ ಸ್ವತಃ ತಾವೇ ನೋಡಿಕೊಂಡಳು. ನೆಮ್ಮದಿಯಿಂದ ಸ್ವಂತ ಗಾಡಿ, ಸ್ವಂತ ಮನೆ ಮಾಡಿಕೊಂಡ ಅವಳು " ಒಮ್ಮೆ ತನ್ನ ಹಿಂದಿನ ಬದುಕಿನ ಬಗ್ಗೆ ಹಿಂತಿರುಗಿ ನೋಡಿದಳು.

ಆಗ ಅವಳಿಗೆ ಗೊತ್ತಾಗಿದ್ದು, ರಸ್ತೆ ಅಪಘಾತದಲ್ಲಿ ಸತ್ತು ಹೋಗಿದ್ದು ಬಡತನ. ತನ್ನ ಗಂಡ ಅಲ್ಲ. 


ಈ ಕಥೆಯ ಮೂಲ ಉದ್ದೇಶ "


ಬಡತನವನ್ನು ನಾವೇ ಸೃಷ್ಟಿಸುವುದು ಹೊರತು, ನಮ್ಮ ಪರಿಶ್ರಮ ಅಲ್ಲ. 

                                                 


                                                          ದಿನಕ್ಕೊಂದು ಕಥೆ                



    ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ


ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ನಮಗಿರುವ ಸೌಲಭ್ಯಗಳನ್ನು ಬಳಸುತ್ತಾ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಇನ್ನಷ್ಟು ಉತ್ತಮ ಪ್ರಯತ್ನ ಮಾಡಬೇಕೆ ಹೊರತು ಇತರರ ಜತೆಗೆ ಹೋಲಿಸಿಕೊಂಡು ನರಳಬಾರದು. ಆ ರೀತಿಯ ಸಂದೇಶವನ್ನು ನೀಡುವ ಒಂದು ಒಳ್ಳೆಯ ಕಥೆ ಸದ್ಯಕ್ಕೆ ವೈರಲ್ ಆಗಿದೆ. ಕೆಲವು ಪಕ್ಷಿಗಳ ಮೂಲಕ ನಮ್ಮ ಆಲೋಚನೆ ವಿಷಯವನ್ನು ಸರಳವಾಗಿ ಹೇಳಿದ್ದಾರೆ ಈ ಕಥೆಯಲ್ಲಿ.


ಒಂದು ಕಾಡಿನಲ್ಲಿ ಒಂದು ಕಾಗೆ ವಾಸವಾಗಿತ್ತು. ಅದರ ಜೀವನ ಸೊಗಸಾಗಿ ಸಾಗುತ್ತಿತ್ತು. ಆದರೆ ಪಕ್ಕದಲ್ಲೇ ಇದ್ದ ಕೊಳದಲ್ಲಿನ ಹಂಸವನ್ನು ನೋಡಿ ‘ಅದು ತುಂಬಾ ಬೆಳ್ಳಗೆ, ಸುಂದರವಾಗಿ ಇದೆ. ನಾನು ಕಪ್ಪಗಿದ್ದೇನೆ’ ಎಂದು ನೋವನುಭವಿಸುವುದನ್ನು ಆರಂಭಿಸಿತು. ಒಂದು ದಿನ ಹಂಸದ ಬಳಿ ಹೋಗಿ ‘ನೀನು ತುಂಬಾ ಸುಂದರವಾಗಿ ಇರುತ್ತೀಯ. ಆನಂದವಾಗಿಯೂ ಇರುತ್ತೀಯ ಅಲ್ಲವೇ’ ಎಂದಿತು. ಕಾಗೆ ಮಾತಿಗೆ ಹಂಸ ಉತ್ತರ ಕೊಡುತ್ತಾ, ‘ನಿಜ ನಾನು ಸುಂದರವಾಗಿರುತ್ತೇನೆ. ಆದರೆ ಗಿಳಿರಾಮ ನನಗಿಂತಲೂ ಎರಡು ಬಣ್ಣಗಳಲ್ಲಿ ಸುಂದರವಾಗಿರುತ್ತದೆ. ಅದರ ಜತೆ ಹೋಲಿಸಿದರೆ ನಾನೇನು ಅಲ್ಲ’ ಎಂದು ಬೇಸರಿಸಿಕೊಂಡಿತು. ಇದನ್ನು ಕೇಳಿದ ಕಾಗೆ ಗಿಳಿ ಬಳಿಗೆ ಹೋಗಿ, ‘ಹಂಸಕ್ಕಿಂತಲೂ ಸುಂದರವಾಗಿ ನೀನಿದ್ದೀಯ’ ಎಂದಿತು. ಈ ಮಾತಿಗೆ ಗಿಳಿ, ‘ನನ್ನದೇನಿದೆ ಕೇವಲ ಎರಡು ಬಣ್ಣಗಳು. ನವಿಲು ಬಣ್ಣಬಣ್ಣದ ಗರಿಗಳಿಂದ ತುಂಬಾ ಸುಂದರವಾಗಿರುತ್ತದೆ. ಅದನ್ನು ನೋಡಲು ಜನ ಪೈಪೋಟಿ ಬೀಳುತ್ತಿರುತ್ತಾರೆ. ‘ ಎಂದಿತು. ನವಿಲನ್ನು ನೋಡಲು ಕಾಗೆ ಜೂಗೆ ಹೋಯಿತು. ಅಲ್ಲಿ ಅದನ್ನು ನೋಡಲು ಜನ ಗುಂಪು ಗುಂಪಾಗಿದ್ದಾರೆ. ಅವರೆಲ್ಲಾ ಹೊರಟು ಹೋದ ಮೇಲೆ ನವಿಲಿನೊಂದಿಗೆ ಕಾಗೆ, ‘ನೀನು ಹಂಸ, ಗಿಳಿಗಿಂತಲೂ ತುಂಬಾ ಸುಂದರವಾಗಿದ್ದೀಯ. ನೀನು ಅದೃಷ್ಟವಂತೆ. ನಿನ್ನ ನೋಡಲು ಜನರೆಲ್ಲಾ ಬರುತ್ತಿದಾರೆ.’ ಇದರಿಂದ ನವಿಲು ಭಯದಿಂದ ‘ಹಾಂ ಏನು ಅದೃಷ್ಟ ಬಿಡಮ್ಮ…ಸುಂದರವಾಗಿದ್ದೀನಿ ಎಂದು ಈ ಜೂನಲ್ಲಿ ನನ್ನನ್ನು ತಂದು ಹಾಕಿದ್ದಾರೆ. ಇಲ್ಲಿ ಒಂದೇ ಒಂದು ಕಾಗೆ ಸಹ ಇಲ್ಲ. ಅವೆಲ್ಲಾ ಹಾಯಾಗಿ ಹೊರಗಿನ ಪ್ರಪಂಚದಲ್ಲಿ ಓಡಾಡಿಕೊಂಡಿವೆ. ನಾನು ಕಾಗೆಯಾಗಿ ಯಾಕೆ ಹುಟ್ಟಲಿಲ್ಲ ಎಂದು ಎಷ್ಟೋ ಸಲ ವ್ಯಥೆ ಪಟ್ಟಿದ್ದೇನೆ. ‘ ಎಂದು ನವಿಲು ಹೇಳಿದ ಬಳಿಕ ಕಾಗೆಗೆ ಜ್ಞಾನೋದಯವಾಯಿತು.


ಮನುಷ್ಯರಲ್ಲೂ ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವವರಿಗೇನು ಬರವಿಲ್ಲ. ಈ ರೀತಿ ಮಾಡುತ್ತಾ ತಮ್ಮಲ್ಲಿನ ಜ್ಞಾನವನ್ನು, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅವರವರ ವಿಶೇಷತೆ ಅವರಿಗೆ ಇದ್ದೇ ಇರುತ್ತದೆ. ಅವರವರ ಸಮಸ್ಯೆಗಳೂ ಅವರವರಿಗೆ ಇರುತ್ತವೆ. ನಮಗೆ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಸದ್ಭಳಕೆ ಮಾಡಿಕೊಂಡರೆ ಸಂತೃಪ್ತಿಯಾಗಿ ಜೀವಿಸಬಹುದು ಎಂಬುದನ್ನು  ನಮಗೆ ನೆನಪಿಸುತ್ತದೆ. 


 ಕೃಪೆ: kannada+

Saturday, October 30, 2021

ಪುನೀತ್ ಎನ್ನುವ ರಾಜಕುಮಾರ

 


ಸಾಯುವ ವಯಸ್ಸಾ ಇದು ?


ಪುನಿತ್ ರಾಜಕುಮಾರ್  ಹೆಸರಿಗೆ ತಕ್ಕಂತೆ, ಆಧುನಿಕ‌ ಪ್ರಜಾಪ್ರಭುತ್ವದಲ್ಲಿ ರಾಜಕುವರನೇ ಸರಿ.‌.. 

ಸಿರಿ ಸಂಪತ್ತು  ಕಾಲುಮುರಿದು ಬಿದ್ದಿತ್ತು... ಅಷ್ಟ ಐಶ್ವರ್ಯವಿತ್ತು.

ಕೋಟಿ ಕೋಟಿ  ಜನಮಾನಸದಲ್ಲಿದ್ದರು..

ಬಹುದೊಡ್ಡ ಸೆಲೆಬ್ರಟಿಯಾಗಿದ್ದರು..

ಹಲವು ಕ್ಷೇತ್ರಗಳಲ್ಲಿ ಸಾಧಿಸಿದ್ದರು..

ಚಲನಚಿತ್ರೋದ್ಯಮದ ದೃವತಾರೆಯಾಗಿ ಮೆರೆದರು.. 

ಅಪಾರ ಬಂಧು ಬಳಗ ವಿತ್ತು.

ಆದರೆ..

ಜಿಮ್ಮು ವ್ಯಾಯಾವ ವಾಕಿಂಗ್ ವರ್ಕೌಟ್ ಕೈಹಿಡಿಲಿಲ್ಲ..

ಪೌಷ್ಠಿಕ ಆಹಾರ ಸೇವನೆ ಆಯಸ್ಸು ಹೆಚ್ಚಿಸಲಿಲ್ಲ.

ಸಾವಿರಾರು ಜನ ಆಳು ಕಾಳುಗಳಿದ್ದರೂ ಪ್ರಯೋಜನವಾಗಲಿಲ್ಲ.. 

ಜಪ ತಪ ಅರ್ಚನೆ ದೇವಸ್ಥಾನ ಸುತ್ತಿದರೂ ಸಾವು ದೂರ ಸರಿಯಲಿಲ್ಲ..

ವಿನಯ ಸದ್ಗುಣ ದಾನ ಧರ್ಮ ವಿದ್ದರೂ ಅಮರನಾಗಲಿಲ್ಲ..

ಗುರು ಹಿರಿಯರು ಬಂಧು ಬಳಗದ ಹಾರೈಕೆ ಕೃಪೆ ಇದ್ದರೂ ಬದುಕಲಿಲ್ಲ.

ಜ್ಯೋತಿಷ್ಯಗಳ ಜಾತಕ ಕೆಲಸ ಮಾಡಲಿಲ್ಲ..

ಅಪ್ಪು ಗೆ..

ನಿತ್ಯವೂ ಆರೋಗ್ಯಕ್ಕಾಗಿ,  ಲಕ್ಷ ಲಕ್ಷ ಕರ್ಚು ಮಾಡುವ ಶಕ್ತಿ ಇತ್ತು.. ಕನಸಿನಲ್ಲಿ ಕಂಡದ್ದು ಮನಸ್ಸಿನಲ್ಲಿ ಮೂಡಿದ್ದು.. ಕ್ಷಣದಲ್ಲೇ ಕಣ್ಣ ಮುಂದೆ ತರುವ ಎಲ್ಲ ಶಕ್ತಿ ಇತ್ತು..


ಉತ್ತಮ ಆರೋಗ್ಯಕ್ಕಾಗಿ  ಅಗತ್ಯ ಆಧುನಿಕ  ವೈದ್ಯಕೀಯ ವ್ಯವಸ್ಥೆಯೇ ಇವರ ಕಾಲ ಬುಡದಲ್ಲಿತ್ತು..

ಎಲ್ಲವೂ ಎಲ್ಲರೀತಿಯಿಂದಲೂ ಸುವ್ಯವಸ್ಥಿತವಾಗಿ ಸುಬಧ್ರವಾಗಿತ್ತು.. 

ಆದರೂ .. 

ಸದೃಢ ದೇಹ ಆರೋಗ್ಯ ವಿದ್ದರೂ.. ತೃಪ್ತಿಕರ ಆಯಸ್ಸು  ಕಳೆಯಲು ಅಪ್ಪುಗೆ  ಆಗಲಿಲ್ಲ..  ಕೇವಲ 46 ವರ್ಷಗಳಲ್ಲೇ  ಸಾವು ಕಂಡಿದ್ದು ತೀರಾ  ಅಸಹಜ ..

ಆರೋಗ್ಯ ಆಯಸ್ಸಿನ ದೃಷ್ಟಿಕೋನದಲ್ಲಿ ಈ ಬದುಕಿನ ಕೆಲವೊಂದು ಆಕಸ್ಮಿಕ ಘಟನೆಗಳನ್ನು ಸಾರ್ವತ್ರಿಕರಣ ಮಾಡಲು ಸಾಧ್ಯವಿಲ್ಲ. ಸಾರ್ವತ್ರಿಕರಣ ಮಾಡಿದ ಘಟನೆಗಳನ್ನು ವೈಯಕ್ತಿಕರಣ ಮಾಡಲೂ ಅಸಾಧ್ಯ.   ನಿತ್ಯ ಕಲುಸಿತ ನೀರು ಕುಡಿದೇ ನೂರುವರ್ಷ ಬದುಕುವರನ್ನು ನೋಡಿದ್ದೇವೆ.  ಅಳತೆಬದ್ದವಾಗಿ ಪೌಷ್ಟಿಕ ಮೃಷ್ಟಾನ್ನ ತಿಂದರೂ ಅಸಹಜ ಸಾವು ಕಂಡವರನ್ನು ಕಂಡಿದ್ದೇವೆ.

ಈ ಬದುಕೇ ಹೀಗೆ.. 

ಯಾರಿಗೆ ..

ಎಲ್ಲಿ ಯಾವಾಗ ಹೇಗೆ ಏನು ಸಂಭವಿಸುತ್ತದೆ  ಎಂದು ಯಾರಿಂದಲೂ ಖಚಿತವಾಗಿ ಕರಾರುವಕ್ಕಾಗಿ  ಹೇಳಲು ಸಾಧ್ಯವಿಲ್ಲ.

ಸಾವಿನ ಮುಂದೆ ಎಲ್ಲವೂ  ಶೂನ್ಯ 

ಬಾರದು ಬಪ್ಪದು  ಸನಿಹ ಬಂದರೆ ತಪ್ಪದು.

ಈ ಕ್ಷಣ ಸಹಜವಾಗಿದ್ದ ವ್ಯಕ್ತಿ  ಕ್ಷಾಣಾರ್ಧದಲ್ಲಿ ಶವವಾಗಿ  ಮಲಗುವದು  ಎಂದರೆ .. ? ಅರಗಿಸಿಕೊಳ್ಳುವದು ಹೇಗೆ?

ಈ ಮೂರುದಿನದ ಬಾಳ ಸಂತೆಯಲಿ ಬದುಕಿನ ಬಹುದೊಡ್ಡ ಸತ್ಯ ಸಂದೇಶವಿದು ..

ಸಾವಿಗೆ ಜಾತಿ ಕುಲ ಸಿರಿ ಸಂಪತ್ತು ಸ್ತ್ರೀ ಪುರುಷ  ಬಣ್ಣ ಪ್ರದೇಶ ಮಗು ವೃದ್ದ ಮುಪ್ಪು ಯವ್ವನ ಬಾಲ್ಯ. ಯಾವುದರ ಹಂಗು ಪರಿವು ಲವಲೇಶವೂ ಇಲ್ಲ..

ಪಡದಷ್ಟೇ ಈ ಆಯಸ್ಸು 

ಈ ಜೀವ ಜೀವನ‌ ಕ್ಷಣಿಕ ..



ಪುನೀತ್ ರಾಜ್ ಕುಮಾರ್ ಜೀವನ ಯಾತ್ರೆ


ಪುನೀತ್ ರಾಜ್‍ಕುಮಾರ್ ಅವರು, 17 ಮಾರ್ಚ್ 1975ರಂದು ಜನಿಸಿದ್ದರು. ನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರಾಗಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೂ ಕನ್ನಡ ಚಿತ್ರರಂಗದಲ್ಲಿ ತಂದೆ ದಿವಂಗತ ಡಾ.ರಾಜ್ ಕುಮಾರ್ ಜೊತೆಗೆ ನಟರಾಗಿ ತೊಡಗಿಸಿಕೊಂಡಿದ್ದ ಅವರು, ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ.


ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು.


ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002′ ಅಪ್ಪು ಚಿತ್ರದಲ್ಲಿ ಅಭಿನಯಿಸಿದರು. ಅವರ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ.


ವೈಯಕ್ತಿಕ ಜೀವನ


ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ 17 ಮಾರ್ಚ್ 1975ರಂದು ಜನಿಸಿದರು. ಇವರು ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್ ಗೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ದ್ರಿತಿ ಮತ್ತು ವಂದಿತಾ. ಇವರ ಮೊದಲ ಹೆಸರು ಮಾ.ಲೋಹಿತ್ ಆಗಿತ್ತು.


ಅಭಿನಯಿಸಿದ ಚಲನಚಿತ್ರಗಳು


ಬಾಲ ನಟನಾಗಿ ಅಭಿನಯಿಸಿದಂತ ಚಿತ್ರಗಳು


ಪ್ರೇಮದ ಕಾಣಿಕೆ


ಭಾಗ್ಯವಂತ


ಎರಡು ನಕ್ಷತ್ರಗಳು


ಬೆಟ್ಟದ ಹೂವು


ಚಲಿಸುವ ಮೋಡಗಳು


ಶಿವ ಮೆಚ್ಚಿದ ಕಣ್ಣಪ್ಪ


ಪರಶುರಾಮ್


ಯಾರಿವನು


ಭಕ್ತ ಪ್ರಹ್ಲಾದ


ವಸಂತ ಗೀತ


ನಟರಾಗಿ ಅಭಿನಯಿಸಿದಂತ ಚಿತ್ರಗಳು


ಅಪ್ಪು


ಅಭಿ


ವೀರ ಕನ್ನಡಿಗ


ಮೌರ್ಯ


ಆಕಾಶ್


ನಮ್ಮ ಬಸವ


ಅಜಯ್


ಅರಸು


ಮಿಲನ


ಬಿಂದಾಸ್


ವಂಶಿ


ರಾಜ್ ದ ಶೋಮ್ಯಾನ್


ಪೃಥ್ವಿ


ರಾಮ್


ಜಾಕಿ


ಹುಡುಗರು


ಪರಮಾತ್ಮ


ಅಣ್ಣ ಬಾಂಡ್


ಯಾರೇ ಕೂಗಾಡಲಿ


ನಿನ್ನಿಂದಲೇ


ಮೈತ್ರಿ


ಪವರ್ ಸ್ಟಾರ್


ಧೀರ ರಣಧೀರ


ಚಕ್ರವ್ಯೂಹ


ದೊ‍ಡ್ಮನೆ ಹುಡುಗ


ರಾಜಕುಮಾರ


ಅಂಜನಿ ಪುತ್ರ


ನಟಸಾರ್ವಭೌಮ


ಯುವರತ್ನ

ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಹೀಗೆ ಬಹುಮುಖ ಪ್ರತಿಭೆಯ ಮೂಲಕ, ಬಾಲನಟನಾಗಿ, ನಟನಾಗಿ, ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದಂತ ಕನ್ನಡದ ದೊಡ್ಮನೆಯ ಕೊಂಡಿಯೊಂದು, ಇಂದು ಇನ್ನಿಲ್ಲವಾಗಿದೆ. ಈ ಮೂಲಕ ನಟ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ.

ಕಥೆಗಳು

                                    ಮುಂಡಿಗೆಗಳು                                     'ಮುಂಡಿಗೆಗಳು' ಹರಿದಾಸ ಸಾಹಿತ್ಯದಲ್ಲಿ ಬರುವ  ಒಂದು ಪ್ರಾ...